ADVERTISEMENT

ತೃತೀಯ ಲಿಂಗಿ ಸೋಗಿನಲ್ಲಿ ಭಿಕ್ಷಾಟನೆ ಮಾಡುತ್ತಿದ್ದವ ಕೊಲೆ

ನೈಸ್ ರಸ್ತೆಯಲ್ಲಿ ಕೃತ್ಯ; ಮೂವರು ತೃತೀಯ ಲಿಂಗಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 19:53 IST
Last Updated 17 ಆಗಸ್ಟ್ 2020, 19:53 IST

ಬೆಂಗಳೂರು: ತೃತೀಯ ಲಿಂಗಿ ವೇಷ ತೊಟ್ಟು ನೈಸ್‌ ರಸ್ತೆಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದರೆಂಬ ಕಾರಣಕ್ಕೆ ರಾಜೇಂದ್ರ ಕುಮಾರ್ (32) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಮೂವರು ತೃತೀಯ ಲಿಂಗಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

‘ಕೋನಪ್ಪನ ಅಗ್ರಹಾರದ ದೇವಿ ಅಲಿಯಾಸ್ ಅಶೋಕ್‌ಕುಮಾರ್ (26), ನಿತ್ಯಾ ಅಲಿಯಾಸ್ ರಾಮಕೃಷ್ಣ (24) ಹಾಗೂ ಭವನಾ ಅಲಿಯಾಸ್ ಅಬ್ದುಲ್ ಅಜೀಷ್ (31) ಎಂಬುವರೇ ಬಂಧಿತರು. ಇವರೆಲ್ಲರೂ ತಮಿಳುನಾಡಿನವರು. ನಗರಲ್ಲಿ ನೆಲೆಸಿದ್ದ ಇವರು ನಿತ್ಯವೂ ನೈಸ್‌ ರಸ್ತೆ ಹಾಗೂ ಇತರೆಡೆ ಭಿಕ್ಷಾಟನೆ ಮಾಡುತ್ತಿದ್ದರು. ತಮ್ಮ ಜಾಗದಲ್ಲೇ ಭಿಕ್ಷಾಟನೆ ಮಾಡುತ್ತಿದ್ದರೆಂಬ ಕಾರಣಕ್ಕೆ ರಾಜೇಂದ್ರ ಅವರನ್ನು ಕೊಂದಿದ್ದರು’ ಎಂದು ಪೊಲೀಸರು ಹೇಳಿದರು.

‘ರಾಮನಗರದ ರಾಜೇಂದ್ರ, ಹಗಲು ಹೊತ್ತು ಗಾರ್ಮೇಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ತೃತೀಯ ಲಿಂಗಿಯಂತೆ ಸೀರೆ ತೊಟ್ಟು ನೈಸ್ ರಸ್ತೆಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು.’

ADVERTISEMENT

‘ಇದೇ 14ರಂದು ನೈಸ್ ರಸ್ತೆಯಲ್ಲಿ ರಾಜೇಂದ್ರ ಲಾರಿ ಚಾಲಕರಿಂದ ಭಿಕ್ಷೆ ಪಡೆಯುತ್ತಿದ್ದರು. ಅದೇ ಸಂದರ್ಭದಲ್ಲೇ ಕಾರಿನಲ್ಲಿ ಸ್ಥಳಕ್ಕೆ ಹೋಗಿದ್ದ ಆರೋಪಿಗಳು, ರಾಜೇಂದ್ರ ಅವರನ್ನು ಅಪಹರಿಸಿ ತಮ್ಮ ಮನೆಗೆ ಕರೆದೊಯ್ದಿದ್ದರು. ಅಲ್ಲಿ ಆತನ ಮೇಲೆ ಹಲ್ಲೆ ಮಾಡಿ ಕೊಂದಿದ್ದರು’ ಎಂದೂ ತಿಳಿಸಿದರು.

ಕೊಲೆ ಮುಚ್ಚಿಡಲು ಯತ್ನ; ‘ರಾಜೇಂದ್ರ ಮೃತದೇಹವನ್ನು ಅವರ ಸಂಬಂಧಿಕರಾದ ರಾಮನಗರದ ಅಪ್ಪಾಜಿಗೌಡ ಎಂಬುವರ ಮನೆಗೆ ತೆಗೆದುಕೊಂಡು ಹೋಗಿದ್ದ ಆರೋಪಿಗಳು, ‘ನೈಸ್ ರಸ್ತೆಯಲ್ಲಿ ಯಾರೋ ಕೊಲೆ ಮಾಡಿ ಮೃತದೇಹ ಎಸೆದು ಹೋಗಿದ್ದರು’ ಎಂದು ಸುಳ್ಳು ಹೇಳಿದ್ದರು. ‘ಪೊಲೀಸ್‌ ಕಡೆ ಹೋದರೆ ಸಮಸ್ಯೆಯಾಗುತ್ತದೆ. ಅಂತ್ಯಕ್ರಿಯೆ ಮಾಡಿ ಮುಗಿಸಿ’ ಎಂದು ಹೇಳಿ ಅಲ್ಲಿಂದ ಹೊರಟು ಬೆಂಗಳೂರಿಗೆ ವಾಪಸು ಬಂದಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.