ADVERTISEMENT

ಜೋಡಿ‌ ಕೊಲೆ ಪ್ರಕರಣ: ಆರೋಪಿ ಖುಲಾಸೆ

ನಿಗೂಢವಾಗೇ ಉಳಿದ ಘೋರ ಕೃತ್ಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 19:05 IST
Last Updated 8 ಫೆಬ್ರುವರಿ 2019, 19:05 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಘಟನೆಗೆ ಸಂಬಂಧಿಸಿದ ಪ್ರತ್ಯಕ್ಷದರ್ಶಿಯು ಪ್ರತಿಕೂಲ ಸಾಕ್ಷಿಯಾಗಿ ಪರಿಣಮಿಸಿದ ಕಾರಣ ಅಂತಹವರನ್ನು ಮುಖ್ಯಸಾಕ್ಷಿ ಎಂದು ಪರಿಗಣಿಸಲು ಆಗುವುದಿಲ್ಲ’ ಎಂಬ ಕಾರಣಕ್ಕೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಜೋಡಿ‌ ಕೊಲೆ ಪ್ರಕರಣದ ಆರೋಪಿಯನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.

‘ನಗರದ 51ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು’ ಎಂದು ಕೋರಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೆಂಚಮಣಿ ಗ್ರಾಮದ ವಿ. ಶಿವ (37) ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಹಾಗೂ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ವಿಭಾಗೀಯ ಪೀಠ ಪುರಸ್ಕರಿಸಿದೆ.

ಏಳೂವರೆ ವರ್ಷಕ್ಕೂ ಹೆಚ್ಚು ಜೈಲಿನಲ್ಲಿದ್ದ ಆರೋಪಿ ಈಗ ಬಂಧಮುಕ್ತರಾಗಿದ್ದಾರೆ.

ADVERTISEMENT

ಕೋರ್ಟ್‌ ಹೇಳಿದ್ದೇನು?: ‘ದಂಡ ಪ್ರಕ್ರಿಯಾ ಸಂಹಿತೆ-1973ರ ಕಲಂ 164ರ ಅಡಿಯಲ್ಲಿ ಘಟನೆಯ ಪ್ರತ್ಯಕ್ಷದರ್ಶಿಯು ಮ್ಯಾಜಿಸ್ಟ್ರೇಟ್‌ ಮುಂದೆ ನೀಡಿದ ಸ್ವಯಂ ಹೇಳಿಕೆಯ ಆಧಾರ ಮಾತ್ರದಿಂದಲೇ ಆರೋಪಿಯ ವಿರುದ್ಧದ ಪ್ರಕರಣ ರುಜುವಾತು ಆಗುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಈ ಪ್ರಕರಣದಲ್ಲಿ ದೂರು ನೀಡಿದ ಹಾಗೂ ತನಿಖೆ ವೇಳೆ ನೀಡಿದ ಹೇಳಿಕೆ ಮತ್ತು ಸಾಕ್ಷಿಗಳು ಒಂದಕ್ಕೊಂದು ವ್ಯತಿರಿಕ್ತವಾಗಿವೆ. ಪ್ರತ್ಯಕ್ಷದರ್ಶಿಯೇ ತಪ್ಪೊಪ್ಪಿಗೆ ಸಾಕ್ಷಿ ಹೇಳಿಕೆಯಾಗಿ ನೀಡಿದ ಅಂಶಗಳನ್ನು ಪುಷ್ಟೀಕರಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣ ಏನು?: ‘ಪರಪ್ಪನ ಅಗ್ರಹಾರ ಜೈಲಿಗೆ ಸಮೀಪದ ಹೊಸೂರು ಮುಖ್ಯ ರಸ್ತೆಯ ತಿಮ್ಮರೆಡ್ಡಿ ಶಾಲೆಯ ಪಕ್ಕದ ಗುಜರಿ ಅಂಗಡಿ ಮುಂದೆ ಮಲಗಿದ್ದ ಚಾಮರಾಜ ಮತ್ತು ಆತನ ಪತ್ನಿ ಗೋವಿಂದಮ್ಮ ಅವರನ್ನು 2012ರ ಫೆಬ್ರುವರಿ 17ರಂದು ಮಧ್ಯರಾತ್ರಿ 1.30ರ ವೇಳೆ ಅಪರಿಚಿತರು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ’ ಎಂದು ಪರಪ್ಪನ ಅಗ್ರಹಾರ ಪೊಲೀಸರು ದೂರು ದಾಖಲಿಸಿದ್ದರು.

ಗುಜರಿ ಅಂಗಡಿ ಮಾಲೀಕ ಕದರಿಯನ್‌ ಈ ದೂರು ನೀಡಿದ್ದ. ಶಂಕೆಯ ಮೇಲೆ ಮುನಿರೆಡ್ಡಿ ಪಾಳ್ಯ ವ್ಯಾಪ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಶಿವ ಮತ್ತು ಆತನ ಪತ್ನಿ ರೇಣುಕಮ್ಮಳನ್ನು 2012ರ ಮೇ 7ರಂದು ಬಂಧಿಸಲಾಗಿತ್ತು.

ಎರಡು ದಿನಗಳ ಪೊಲೀಸ್‌ ಕಸ್ಟಡಿ ನಂತರ ನ್ಯಾಯಾಲಯ ಶಿವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ರೇಣುಕಮ್ಮ ತಪ್ಪೊಪ್ಪಿಗೆ ಸಾಕ್ಷಿಯಾಗಿದ್ದರು. ನಂತರ ವಿಚಾರಣೆ ವೇಳೆ ಪ್ರತಿಕೂಲ ಸಾಕ್ಷಿಯಾಗಿ ಬದಲಾದ ರೇಣುಕಮ್ಮ ತಮ್ಮ ಮೊದಲಿನ ಹೇಳಿಕೆಗೆ ಭಿನ್ನವಾದ ಹೇಳಿಕೆ ನೀಡಿದ್ದರು.

ವಿಚಾರಣೆ ನಡೆಸಿದ್ದ ಸೆಷನ್ಸ್‌ ನ್ಯಾಯಾಧೀಶ ಜಿ.ಡಿ.ಮಹಾವರಕರ್‌ 2015 ಡಿಸೆಂಬರ್‌ 11ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ₹ 30 ಸಾವಿರ ದಂಡ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಶಿವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಆರೋಪಿ ಪರ ಕೆ.ಬಿ.ಕೆ.ಸ್ವಾಮಿ ವಾದ ಮಂಡಿಸಿದರು.

**

‘ಪೂರಕ ಸಾಕ್ಷಿ ಪರಿಗಣನೆ’

‘ತಪ್ಪೊಪ್ಪಿಗೆ ಸಾಕ್ಷಿಗಳ ಹೇಳಿಕೆಗಳನ್ನು ಪ್ರಕರಣಕ್ಕೆ ಪೂರಕ ಸಾಕ್ಷಿಯಾಗಿ ಪರಿಗಣಿಸಬಹುದೇ ಹೊರತು ಈ ಹೇಳಿಕೆಗಳೇ ಮುಖ್ಯ ಸಾಕ್ಷಿ ಆಗುವುದಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಕಣ್ಣಾರೆ ಕಂಡ ಸಾಕ್ಷಿಗಳ ಹೇಳಿಕೆಗೆ ಮತ್ತು ನಂಬಬಹುದಾದ ಸಾಂದರ್ಭಿಕ ಸಾಕ್ಷಿಗಳ ಜೊತೆಯಲ್ಲಿ ಪೂರಕವಾಗಿ ಮಾತ್ರವೇ ತಪ್ಪೊಪ್ಪಿಗೆ ಸಾಕ್ಷಿಗಳ ಹೇಳಿಕೆಗಳನ್ನು ಕೋರ್ಟ್ ಮಾನ್ಯ ಮಾಡಬಹುದು’ ಎಂದು ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.