ADVERTISEMENT

ಮಹಿಳೆ ಕೊಲೆ: ಮಗಳ ಸ್ನೇಹಿತ ಬಂಧನ

​ಪ್ರಜಾವಾಣಿ ವಾರ್ತೆ
Published 6 ಮೇ 2022, 16:15 IST
Last Updated 6 ಮೇ 2022, 16:15 IST

ಬೆಂಗಳೂರು: ಗೋವಿಂದರಾಜನಗರ ಠಾಣೆ ವ್ಯಾಪ್ತಿಯಲ್ಲಿ ನಂಜಮ್ಮ (50) ಅವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ರಾಘವೇಂದ್ರ ಅಲಿಯಾಸ್ ಗೆಡ್ಡೆ (34) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಮೂಡಲಪಾಳ್ಯ ಬಳಿಯ ಎಸ್‌ವಿಜಿ ನಗರದ ನಿವಾಸಿ ನಂಜಮ್ಮ, ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪತಿ ತೀರಿಕೊಂಡಿದ್ದರಿಂದ ಒಂಟಿಯಾಗಿ ವಾಸವಿದ್ದರು. ಮೃತಪಟ್ಟ ಸ್ಥಿತಿಯಲ್ಲಿ ನಂಜಮ್ಮ ಮೃತದೇಹ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. ಮಗಳು ನೀಡಿದ್ದ ದೂರು ಆಧರಿಸಿ ಆರೋಪಿ ರಾಘವೇಂದ್ರನನ್ನು ಬಂಧಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

ಮಗಳ ಜೊತೆ ವಾಸವಿದ್ದ ಆರೋಪಿ: ‘ನಂಜಮ್ಮ ಅವರ 29 ವರ್ಷದ ಮಗಳು, ಪತಿಗೆ ವಿಚ್ಛೇದನ ನೀಡಿ ಇಬ್ಬರು ಮಕ್ಕಳ ಜೊತೆ ಪ್ರತ್ಯೇಕವಾಗಿ ವಾಸವಿದ್ದರು. ವಾಹನ ತೊಳೆಯುವ ಕೆಲಸ ಮಾಡುತ್ತಿದ್ದ ರಾಘವೇಂದ್ರ, ನಂಜಮ್ಮರ ಮಗಳನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದ. ಸಲುಗೆ ಇಟ್ಟುಕೊಂಡು ಅವರ ಮನೆಯಲ್ಲೇ ನೆಲೆಸಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮದ್ಯವ್ಯಸನಿ ಆಗಿದ್ದ ರಾಘವೇಂದ್ರ, ನಿತ್ಯವೂ ಕುಡಿದು ಬಂದ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಬೇಸತ್ತ ನಂಜಮ್ಮರ ಮಗಳು, ಆತನನ್ನು ಮನೆಯಿಂದ ಹೊರಗೆ ಹಾಕಿದ್ದರು’ ಎಂದೂ ತಿಳಿಸಿದರು.

ಕೊಲೆ ಮಾಡಿ ಚಿನ್ನಾಭರಣ ಕದ್ದೊಯ್ದಿದ್ದ: ‘ತನ್ನನ್ನು ಮನೆಯಿಂದ ಹೊರಹಾಕುವಂತೆ ನಂಜಮ್ಮ ಅವರೇ ಮಗಳಿಗೆ ಹೇಳಿದ್ದಾರೆಂದು ಆರೋಪಿ ಭಾವಿಸಿದ್ದ’ ಎಂದು ಪೊಲೀಸರು ಹೇಳಿದರು.

‘ನಂಜಮ್ಮ ಮನೆಗೆ ಗುರುವಾರ ರಾತ್ರಿ ಹೋಗಿದ್ದ ಆರೋಪಿ, ಜಗಳ ತೆಗೆದು ಹಲ್ಲೆ ಮಾಡಿದ್ದ. ಕುತ್ತಿಗೆಗೆ ಪ್ಲಾಸ್ಟಿಕ್ ವೈರ್‌ ಬಿಗಿದು ಕೊಲೆ ಮಾಡಿದ್ದ. ನಂತರ, ನಂಜಮ್ಮ ಅವರ ಚಿನ್ನದ ಸರ ಹಾಗೂ ಕಿವಿಯೋಲೆ ಕದ್ದುಕೊಂಡು ಪರಾರಿಯಾಗಿದ್ದ.’

‘ಶುಕ್ರವಾರ ಬೆಳಿಗ್ಗೆ ಮನೆ ಬಳಿ ಮೊಮ್ಮಗ ಹೋಗಿದ್ದ. ಅಡುಗೆ ಮನೆಯ ಕಿಟಕಿ ಮೂಲಕ ನೋಡಿದಾಗ, ಮೃತದೇಹ ಕಂಡಿತ್ತು. ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.