ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ನ್ಯಾಯಾಲಯಕ್ಕೆ ದರ್ಶನ್‌ ಹಾಜರು: ದಾಖಲೆಗಳಿಗೆ ಸಹಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 14:26 IST
Last Updated 16 ಡಿಸೆಂಬರ್ 2024, 14:26 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿರುವ ಎರಡನೇ ಆರೋಪಿ, ನಟ ದರ್ಶನ್ ಅವರು ಸೋಮವಾರ ಮಧ್ಯಾಹ್ನ 57ನೇ ಸಿಸಿಎಚ್‌ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿದರು.

ವೈದ್ಯಕೀಯ ಚಿಕಿತ್ಸೆಗೆಂದು ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿರುವ ದರ್ಶನ್‌ ಅವರು ಆಸ್ಪತ್ರೆಯಿಂದ ಕಾರಿನಲ್ಲಿ ನ್ಯಾಯಾಲಯಕ್ಕೆ ಬಂದರು. ಜಾಮೀನು ಷರತ್ತು ಪೊರೈಸಿದರು.

ದರ್ಶನ್ ಪರವಾಗಿ ಸಹೋದರ ದಿನಕರ್ ತೂಗುದೀಪ ಹಾಗೂ ನಟ ಧನ್ವೀರ್ ಅವರು ಶ್ಯೂರಿಟಿ ನೀಡಿದರು. ನ್ಯಾಯಾಧೀಶ ಜೈಶಂಕರ್ ಅವರಿಗೆ ಕೈ ಮುಗಿದ ದರ್ಶನ್, ₹1 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್​ಗೆ ಸಹಿ ಹಾಕಿದರು.

ADVERTISEMENT

ಇದೇ ವೇಳೆ ಮುಟ್ಟುಗೋಲು ಹಾಕಿಕೊಂಡಿದ್ದ ದರ್ಶನ್ ಅವರ ಪಾಸ್‌ಪೋರ್ಟ್​ ವಾಪಸ್ ನೀಡಲು ನ್ಯಾಯಾಲಯ ಸಮ್ಮತಿ ನೀಡಿದೆ. ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಳಿಸಿದ ದರ್ಶನ್ ಅವರು ಮತ್ತೆ ಬಿಜಿಎಸ್‌ ಆಸ್ಪತ್ರೆಗೆ ವಾಪಸಾದರು.

ಬಳ್ಳಾರಿ ಜೈಲಿನಲ್ಲಿದ್ದಾಗ ದರ್ಶನ್‌ ಅವರಿಗೆ ತೀವ್ರವಾದ ಬೆನ್ನು ನೋವು ಕಾಣಿಸಿಕೊಂಡಿತ್ತು. ವೈದ್ಯಕೀಯ ಚಿಕಿತ್ಸೆಗೆಂದು ಹೈಕೋರ್ಟ್‌ನಿಂದ ಈ ಹಿಂದೆ ಮಧ್ಯಂತರ ಜಾಮೀನು ಪಡೆದುಕೊಂಡಿದ್ದ ದರ್ಶನ್ ಅವರು ಒಂದೂವರೆ ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ.13ರಂದು ಹೈಕೋರ್ಟ್, ದರ್ಶನ್ ಸೇರಿದಂತೆ ಏಳು ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿತ್ತು. ಇಬ್ಬರ ಶ್ಯೂರಿಟಿ, ₹1 ಲಕ್ಷ ಮೌಲ್ಯದ ಬಾಂಡ್, ಸಾಕ್ಷ್ಯ ನಾಶ ಪಡಿಸದಂತೆ ನ್ಯಾಯಾಲಯ ಷರತ್ತು ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.