ADVERTISEMENT

ಕೊಲೆ ಮಾಡಲು ಬಂದು ತಾನೇ ಕೊಲೆಯಾದ ರೌಡಿ

ನಾಲ್ವರು ಆರೋಪಿಗಳನ್ನು ಬಂಧಿಸಿದ ಕಾಡುಗೋಡಿ ಠಾಣೆಯ ಪೊಲೀಸರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:25 IST
Last Updated 13 ಜೂನ್ 2025, 16:25 IST
ಪುನೀತ್
ಪುನೀತ್   

ಬೆಂಗಳೂರು: ವಿಜಯಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದ್ದ ರೌಡಿ ಶೀಟರ್‌ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಕಾಡುಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಹೇಶ್, ಶ್ರೀಕಾಂತ್, ರಾಜೇಶ್ ಮತ್ತು ಸುಮಂತ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಜೂನ್​ 10ರಂದು ರಾತ್ರಿ ಕಾಡುಗೋಡಿಯ ವಿಜಯಲಕ್ಷ್ಮಿ ಬಡಾವಣೆಯಲ್ಲಿ ಪುನೀತ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ADVERTISEMENT

‘ಆರೋಪಿ ಮಹೇಶ್ ಬಳಿಯಿದ್ದ ಬೈಕ್ ಅನ್ನು ₹40 ಸಾವಿರಕ್ಕೆ ಪುನೀತ್‌ ಖರೀದಿಸಿದ್ದ. ಆದರೆ, ಹಣ ನೀಡದೇ ಸತಾಯಿಸುತ್ತಿದ್ದ. ನಂತರ, ಹಣ ಕೊಡುವುದಿಲ್ಲ ಎಂದು ಪುನೀತ್ ಬೆದರಿಕೆ ಹಾಕಿದ್ದ. ಇಷ್ಟಕ್ಕೆ ಸುಮ್ಮನಾಗದೇ ನಾನು ಕೇಳಿದಾಗ ನೀನೇ ಹಣ ಕೊಡಬೇಕು. ಇಲ್ಲದಿದ್ದರೆ ನಿನ್ನ ಪುತ್ರಿಯನ್ನು ಅಪಹರಣ ಮಾಡುವುದಾಗಿಯೂ ಮಹೇಶ್‌ಗೆ ಎಚ್ಚರಿಸಿದ್ದ. ಇದರಿಂದ ಆತಂಕಕ್ಕೆ ಒಳಗಾದ ಮಹೇಶ್‌, ತನ್ನ ಸ್ನೇಹಿತರಿಗೆ ಮಾಹಿತಿ ನೀಡಿದ್ದ. ಶ್ರೀಕಾಂತ್, ರಾಜೇಶ್ ಮತ್ತು ಸುಮಂತ್ ಅವರು ಇಬ್ಬರ ಮಧ್ಯೆ ಸಂಧಾನಕ್ಕೆ ಪ್ರಯತ್ನಿಸಿದ್ದರು. ಅದಕ್ಕೆ ಪುನೀತ್‌ ಒಪ್ಪಿರಲಿಲ್ಲ. ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ’ ಎಂದು ಪೊಲೀಸರು ಹೇಳಿದರು.

ಜೂನ್ 10ರಂದು ರಾತ್ರಿ 9.30ರ ಸುಮಾರಿಗೆ ತನ್ನ ಸ್ನೇಹಿತ ಅರ್ಬಾಜ್ ಜೊತೆ ಮಹೇಶ್ ಮನೆ ಬಳಿಗೆ ಬಂದಿದ್ದ ಪುನೀತ್, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದ್ದ. ಆಗ ಮಹೇಶ್ ಮಾರಕಾಸ್ತ್ರ ಕಸಿದುಕೊಂಡಿದ್ದ. ಗಲಾಟೆ ವೇಳೆ ಅರ್ಬಾಜ್‌ ಪರಾರಿ ಆಗಿದ್ದ. ಬಳಿಕ ಮಹೇಶ್ ಮತ್ತು ಸಹಚರರು, ಪುನೀತ್‌ ಮೇಲೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಮಹೇಶ್ ಶ್ರೀಕಾಂತ್ ರಾಜೇಶ್ ಮತ್ತು ಸುಮಂತ್ ಬಂಧಿತ ಆರೋಪಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.