ADVERTISEMENT

ಮನೆ ಮಾಲೀಕನ ಹತ್ಯೆ; ತಾಯಿ– ಮಗನಿಗೆ ಜೀವಾವಧಿ

ಬೆಸ್ಕಾಂ ನಿವೃತ್ತ ಎಂಜಿನಿಯರ್ ಕೊಲೆ ಪ್ರಕರಣ * ಹೈಕೋರ್ಟ್ ಆದೇಶದನ್ವಯ ಮರು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:56 IST
Last Updated 15 ಆಗಸ್ಟ್ 2019, 19:56 IST

ಬೆಂಗಳೂರು: ಬೆಸ್ಕಾಂ ನಿವೃತ್ತ ಎಂಜಿನಿಯರ್ ಎಸ್.ವಿ. ರಾಘವನ್ ಎಂಬುವರ ಕೊಲೆ ಪ್ರಕರಣ ಸಂಬಂಧ ಹೈಕೋರ್ಟ್ ನೀಡಿದ್ದ ಆದೇಶದನ್ವಯ ಮರು ವಿಚಾರಣೆ ನಡೆಸಿದ್ದ ನಗರದ 53ನೇ ಸಿಸಿಎಚ್ ನ್ಯಾಯಾಲಯ, ಅಪರಾಧಿಗಳಾದ ತಾಯಿ– ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಹರ್ಷಾ ಶರ್ಮಾ ಹಾಗೂ ಆಕೆಯ ಮಗ ಮಾಂಟೋ ಶರ್ಮಾ ಶಿಕ್ಷೆಗೆ ಗುರಿಯಾದವರು. ಈ ಹಿಂದೆ ಶಿಕ್ಷೆಗೆ ಗುರಿಯಾಗಿದ್ದ ಹರ್ಷಾಳ ಪತಿ ಚಂದ್ರಕಾಂತ್ ಎಸ್. ಶರ್ಮಾ, ಜೈಲಿನಲ್ಲೇ ತೀರಿಕೊಂಡಿದ್ದಾನೆ.

‘ಮೂವರು ಆರೋಪಿಗಳಿಗೆ 53ನೇ ಸಿಸಿಎಚ್ ನ್ಯಾಯಾಲಯ2014ರಲ್ಲೇ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿದ್ದ ಆರೋಪಿಗಳು, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮರು ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಶರಣಗೌಡ ಪಾಟೀಲ ಹೇಳಿದರು.

ADVERTISEMENT

‘ಮರು ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಧೀಶರಾದ ಎಸ್. ಶೋಭಾ, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ’ ಎಂದರು.

ಪ್ರಕರಣದ ವಿವರ: ‘ಹೆಣ್ಣೂರು ಠಾಣೆ ವ್ಯಾಪ್ತಿಯ ಎಚ್‌ಬಿಆರ್ ಲೇಔಟ್‌ನಲ್ಲಿಎಸ್.ವಿ. ರಾಘವನ್ ಅವರಿಗೆ ಸೇರಿದ್ದ ಮನೆ ಇತ್ತು. ಅದನ್ನು ಚಂದ್ರಕಾಂತ್ ಶರ್ಮಾ ಅವರಿಗೆ ಬಾಡಿಗೆಗೆ ಕೊಡಲಾಗಿತ್ತು. ₹ 1.50 ಲಕ್ಷ ಮುಂಗಡ ಹಾಗೂ ತಿಂಗಳಿಗೆ ₹18,500 ಬಾಡಿಗೆ ನಿಗದಿ ಮಾಡಲಾಗಿತ್ತು’ ಎಂದುಶರಣಗೌಡ ಪಾಟೀಲ ತಿಳಿಸಿದರು.

‘ಮುಂಗಡ ಹಣವನ್ನು ಚೆಕ್‌ ಮೂಲಕ ನೀಡಿದ್ದ ಚಂದ್ರಕಾಂತ್, ಮನೆಯಲ್ಲಿ ವಾಸವಿದ್ದು ಎರಡು ತಿಂಗಳು ಮಾತ್ರ ಬಾಡಿಗೆ ಹಣ ಕೊಟ್ಟಿದ್ದರು. ನಂತರ ನೀಡಿರಲಿಲ್ಲ. ಮುಂಗಡ ಹಣದ ಚೆಕ್ ಸಹ ಬೌನ್ಸ್ ಆಗಿತ್ತು. ಆಗ ರಾಘವನ್, ಮನೆಗೆ ಹೋಗಿ ಬಾಡಿಗೆ ಹಾಗೂ ಮುಂಗಡ ಹಣ ನೀಡುವಂತೆ ಒತ್ತಾಯಿಸಿದ್ದರು’

‘ರಾಘವನ್ ಮನೆಯನ್ನೇ ತಮ್ಮದಾಗಿಸಿಕೊಳ್ಳಲು ಸಂಚು ರೂಪಿಸಿದ್ದ ಅಪರಾಧಿಗಳು, ₹ 1 ಕೋಟಿಗೆ ಮನೆ ಮಾರಾಟ ಮಾಡಿದಂತೆ ಹಾಗೂ ₹ 50 ಲಕ್ಷ ಮುಂಗಡವಾಗಿ ಮಾಲೀಕರಿಗೆ ನೀಡಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಬಾಡಿಗೆ ನೀಡುವುದಾಗಿ 2008ರ ಜನವರಿ 10ರಂದು ರಾಘವನ್ ಅವರನ್ನು ಮನೆಗೆ ಕರೆಸಿದ್ದ ಅಪರಾಧಿಗಳು, ಚಾಕುವಿನಿಂದ ಇರಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು’ ಎಂದರು.

‘ಪೆಟ್ರೋಲ್ ಸುರಿದು ಶವ ಸುಟ್ಟಿದ್ದರು’

‘ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಕಾರಿನಲ್ಲಿ ಹಾಕಿಕೊಂಡು ಕೃಷ್ಣಗಿರಿ ಸಮೀಪದ ಸಾಮಲಪಳ್ಳಂ-ಒಡ್ಡನೂರು ಗ್ರಾಮಗಳ ಮಧ್ಯೆ ಮೋರಿಯಲ್ಲಿ ಹಾಕಿದ್ದರು. ಗುರುತು ಸಿಗಬಾರದೆಂದು ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ರಾಘವನ್ ನಾಪತ್ತೆ ಬಗ್ಗೆ ದಾಖಲಾಗಿದ್ದ ದೂರಿನ ತನಿಖೆ ಕೈಗೊಂಡ ಹೆಣ್ಣೂರು ಪೊಲೀಸರು, ಕೊಲೆ ಸಂಗತಿ ಪತ್ತೆ ಹಚ್ಚಿ ಅರೋಪಿಗಳನ್ನು ಬಂಧಿಸಿದ್ದರು’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಶರಣಗೌಡ ಪಾಟೀಲ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.