ADVERTISEMENT

ಅಧ್ಯಾತ್ಮದ ಹೆಸರಿನಲ್ಲಿ ಕೇವಲ ಭಜನೆ ಸಲ್ಲದು: ಮುರುಘಾಶರಣರು ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 19:58 IST
Last Updated 13 ಜುಲೈ 2019, 19:58 IST
ಚಂದ್ರಶೇಖರ ಕಂಬಾರ ಅವರು ಶಿವಮೂರ್ತಿ ಮುರುಘಾ ಶರಣರು ರಚಿಸಿದ ಕೃತಿ ಬಿಡುಗಡೆಮಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಬೈರಮಂಗಲ ರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ.ಚಿ. ರಮೇಶ್‌, ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ. ತಿಮ್ಮಯ್ಯ ಇದ್ದಾರೆ
ಚಂದ್ರಶೇಖರ ಕಂಬಾರ ಅವರು ಶಿವಮೂರ್ತಿ ಮುರುಘಾ ಶರಣರು ರಚಿಸಿದ ಕೃತಿ ಬಿಡುಗಡೆಮಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಬೈರಮಂಗಲ ರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ.ಚಿ. ರಮೇಶ್‌, ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ. ತಿಮ್ಮಯ್ಯ ಇದ್ದಾರೆ   

ಬೆಂಗಳೂರು: ‘ಅಧ್ಯಾತ್ಮದ ಹೆಸರಿನಲ್ಲಿ ಕೇವಲ ಭಜನೆ ಮಾಡಿದರೆ ಸಾಲದು. ಬದಲಾಗಿ ಆರೋಗ್ಯಕರ ಅಭಿವೃದ್ಧಿ ಕಾರ್ಯಗಳನ್ನೂ ಮಠಗಳು ಕೈಗೆತ್ತಿಕೊಳ್ಳಬೇಕು’ ಎಂದು ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ತಾವು ರಚಿಸಿದ ‘ಬಸವ ತತ್ವ ವಿಶ್ವ ತತ್ವ’, ‘ಲಿಂಗಾಯತ ಸ್ವತಂತ್ರ ಧರ್ಮ’, ‘ಸಮ ಸಮಾಜ’, ‘ವೃತ್ತಿ ಧರ್ಮ’ ಮೊದಲಾದವು ಸೇರಿದಂತೆ ಒಟ್ಟು 20 ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

‘ಮಠಗಳು ಇರುವುದು ಜನರಿಗಾಗಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾಯಕಗಳನ್ನು ಕೈಗೆತ್ತಿಕೊಳ್ಳಬೇಕು. ಸ್ವಾಮೀಜಿಗಳು ಅಂತರ್ಮುಖಿಯಾಗುವುದರ ಜತೆಗೆ ಪ್ರಯೋಗಶೀಲರಾಗಿಯೂ ಕಾರ್ಯಪ್ರವೃತರಾಗಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ’ ಎಂದರು.

ADVERTISEMENT

‘ಬಸವಣ್ಣ, ಗೌತಮ ಬುದ್ಧ, ಅಂಬೇಡ್ಕರ್ ಸೇರಿದಂತೆ ವಿವಿಧ ದಾರ್ಶನಿಕರ ಪ್ರಭಾವಕ್ಕೊಳಗಾಗಿದ್ದೆ. ಬಿಡುವಿದ್ದಾಗ ಪುಸ್ತಕಗಳನ್ನು ಓದುತ್ತಿದ್ದೆ. ಹಾಗಾಗಿ ಚಿಕ್ಕಂದಿನಿಂದಲೇ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದೆ’ ಎಂದರು.

ಕೃತಿಗಳನ್ನು ಬಿಡುಗಡೆ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ‘ರಾಜ್ಯದಲ್ಲಿ ಅರ್ಧ
ದಷ್ಟು ವಿದ್ಯಾರ್ಥಿಗಳಿಗೆ ಮಠಗಳೇ ಶಿಕ್ಷಣ ಒದಗಿಸುತ್ತಿವೆ. ಮಠಾಧೀಶರು ಈ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದರೆ, ಇಂಗ್ಲಿಷ್‌ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದ ಸಾಂಪ್ರದಾಯಿಕ ಶಿಕ್ಷಣದ ಬಗ್ಗೆ ಕೀಳರಿಮೆ ಮೂಡುತ್ತಿದೆ’ ಎಂದರು.

‘ನಮ್ಮದು ಗೊಡ್ಡು ಪುರಾಣ ಎಂಬ ಮನೋಭಾವ ಮೂಡಲು ಪ್ರಮುಖ ಕಾರಣ ಇಂಗ್ಲಿಷ್ ಕಲಿಕೆ. ನಮ್ಮತನವನ್ನು ಬಿಟ್ಟು, ಅನ್ಯರ ದಾಸರಾಗುತ್ತಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮತ್ತೆ ವಿದೇಶಿಗರ ಗುಲಾಮರಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.