ADVERTISEMENT

‘ಕ್ಲಸ್ಟರ್‌ಗಳ ಮುಖೇನ ಕೈಮಗ್ಗ ವಲಯಕ್ಕೆ ನೆರವು’

ನಬಾರ್ಡ್‌ನ ನೀರಜ್ ಕುಮಾರ್ ವರ್ಮಾ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 17:43 IST
Last Updated 9 ಆಗಸ್ಟ್ 2021, 17:43 IST

ಬೆಂಗಳೂರು: ‘ಕೈಮಗ್ಗ ವಲಯವನ್ನು ಅಭಿವೃದ್ಧಿಗೊಳಿಸಲು ರಾಜ್ಯದಲ್ಲಿ ನೇಕಾರರು ಹಾಗೂ ಕುಶಲಕರ್ಮಿಗಳ ಕ್ಲಸ್ಟರ್‌ಗಳನ್ನು ಗುರುತಿಸಿ, ಅಗತ್ಯ ಆರ್ಥಿಕ ನೆರವು ನೀಡಲುರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್) ನಿರ್ಧರಿಸಿದೆ’ ಎಂದುನಬಾರ್ಡ್‌ನ ಕರ್ನಾಟಕ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ನೀರಜ್ ಕುಮಾರ್ ವರ್ಮಾ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕೈಮಗ್ಗ ಉತ್ಪನ್ನಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತ ಹಾಗೂ ನೇಕಾರರ ಜೀವನಕ್ಕೆ ಆಧಾರ. ಆದರೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ವಿವಿಧ ಸಮಸ್ಯೆಗಳಿಂದ ಕೈಮಗ್ಗ ಕ್ಷೇತ್ರ ನಶಿಸುತ್ತಿದೆ’ ಎಂದರು.

‘ಕ್ಲಸ್ಟರ್‌ಗಳ ರೂಪದಲ್ಲಿ ಕೈಮಗ್ಗ ಮತ್ತು ಅದರ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅವುಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ. ಕ್ಲಸ್ಟರ್‌ನಲ್ಲಿ 100ರಿಂದ ಗರಿಷ್ಠ ಒಂದು ಸಾವಿರಕ್ಕೂ ಹೆಚ್ಚು ಸದಸ್ಯರು ಇರಬಹುದು. ಒಂದು ಕ್ಲಸ್ಟರ್‌ಗೆ ಕನಿಷ್ಠ ₹50 ಲಕ್ಷದಿಂದ ₹2 ಕೋಟಿವರೆಗೆ ಅನುದಾನ ನೀಡಲಾಗುವುದು’ ಎಂದು ವಿವರಿಸಿದರು.

ADVERTISEMENT

‘ಅನುದಾನದಲ್ಲಿ ಕೈಮಗ್ಗ ವಿನ್ಯಾಸ, ಕಚ್ಚಾ ವಸ್ತುಗಳ ಬೇಡಿಕೆ ಮತ್ತು ಪೂರೈಕೆ, ಮಾರುಕಟ್ಟೆ, ಕೌಶಲಗಳ ಬಗ್ಗೆ ತರಬೇತಿ ಸೇರಿದಂತೆ ಸಹಕಾರ ನೀಡಲಾಗುವುದು.ರಾಜ್ಯದಲ್ಲಿ ಈಗಾಗಲೇ ಉಡುಪಿ, ಧಾರವಾಡ, ಶಿವಮೊಗ್ಗ, ಮಂಡ್ಯ ಸೇರಿದಂತೆ ಆರು ಕ್ಲಸ್ಟರ್‌ಗಳನ್ನು ಗುರುತಿಸಿ, ಅಲ್ಲಿ ವಿವಿಧ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಉಡುಪಿ ಕ್ಲಸ್ಟರ್‌ಗೆ ‘ಜಿಐ ಟ್ಯಾಗ್‌’ ಕೂಡ ದೊರಕಿದೆ’ ಎಂದರು.

‘ಚನ್ನಪಟ್ಟಣದ ಗೊಂಬೆ, ಕೊಲ್ಲಾಪುರದ ಪಾದರಕ್ಷೆಯಂತಹ ಕರಕುಶಲ ಉತ್ಪನ್ನಗಳು ಮತ್ತು ಕಲಾವಿದರಿಗೂ ಉತ್ತೇಜನ ನೀಡಲಾಗುವುದು. ನೇಕಾರರು ಮತ್ತು ಕುಶಲಕರ್ಮಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.