ADVERTISEMENT

ನ್ಯಾಯಾಂಗದಲ್ಲಿ ಮರೆಯಾಗುತ್ತಿರುವ ‍ಪಾರದರ್ಶಕತೆ

ಹೈಕೋರ್ಟ್‌ನ ನಿವೃತ್ತ ನ್ಯಾ.ನಾಗಮೋಹನದಾಸ್ ಬೇಸರ

​ಪ್ರಜಾವಾಣಿ ವಾರ್ತೆ
Published 14 ಮೇ 2019, 19:36 IST
Last Updated 14 ಮೇ 2019, 19:36 IST
ಕಾರ್ಯಕ್ರಮದಲ್ಲಿ ಡಾ.ಸರಸು ಥಾಮಸ್‌ ಹಾಗೂ ನ್ಯಾ.ಎಚ್‌.ಎನ್‌. ನಾಗಮೋಹನ್‌ ದಾಸ್ ಮಾತುಕತೆಯಲ್ಲಿ ತೊಡಗಿದ್ದರು. ಸಿಯಡ್ಸ್ ಕಲೆಕ್ಟಿವ್‌ನ ಮಧು ಭೂಷಣ್, ಲಕ್ಷ್ಮೀ ಮೂರ್ತಿ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಡಾ.ಸರಸು ಥಾಮಸ್‌ ಹಾಗೂ ನ್ಯಾ.ಎಚ್‌.ಎನ್‌. ನಾಗಮೋಹನ್‌ ದಾಸ್ ಮಾತುಕತೆಯಲ್ಲಿ ತೊಡಗಿದ್ದರು. ಸಿಯಡ್ಸ್ ಕಲೆಕ್ಟಿವ್‌ನ ಮಧು ಭೂಷಣ್, ಲಕ್ಷ್ಮೀ ಮೂರ್ತಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆಂತರಿಕ ಒತ್ತಡದಿಂದ ನ್ಯಾಯಾಂಗ ವ್ಯವಸ್ಥೆಯಲ್ಲೂ ಪಾರದರ್ಶಕತೆ ಮರೆಯಾಗುತ್ತಿದೆ’ ಎಂದು ‌ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಬೇಸರ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಕುರಿತ ಪ್ರಕರಣದಲ್ಲಿ ನ್ಯಾಯನಿರ್ಣಯದ ಲೋಪಗಳ ಕುರಿತು ಚರ್ಚಿಸುವ ಸಲುವಾಗಿ ವಿವಿಧ ಸಂಘಟನೆಗಳು ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ‘ಪರಮ ಅನ್ಯಾಯ/ಸುಪ್ರೀಂ ಇನ್‌ಜಸ್ಟೀಸ್–ಒಂದು ಬಹಿರಂಗ ಚರ್ಚೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಂತರಿಕ ಒತ್ತಡದ ಜತೆಗೆ ಬ್ಯಾಹ್ಯ ಒತ್ತಡಗಳೂ ಹೆಚ್ಚುತ್ತಿವೆ. ರಂಜನ್ ಗೊಗೊಯಿ ಪ್ರಕರಣದಲ್ಲೂ ಮೇಲ್ನೋಟಕ್ಕೆ ಸಂತ್ರಸ್ತೆಗೆ ಅನ್ಯಾಯವಾಗಿರುವುದು ಗೋಚರಿಸುತ್ತದೆ’ ಎಂದು ಅಭಿಪ್ರಾಯ‍ಪಟ್ಟರು.

ADVERTISEMENT

‘ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಲೋಪಗಳಿವೆ. ಕಾನೂನು ಸಂಹಿತೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಯಾರೂ ಈ ಬಗ್ಗೆ ಪ್ರಶ್ನಿಸಲು ಮುಂದಾಗುವುದಿಲ್ಲ. ಹಾಗಾಗಿ ನ್ಯಾಯಾಲಯದಲ್ಲೂ ಭ್ರಷ್ಟಾಚಾರ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಂತಾಗಿದೆ’ ಎಂದರು.

‘ವ್ಯವಸ್ಥೆ ಸುಧಾರಿಸಬೇಕಾದರೆ ನ್ಯಾಯಾಲಯ ನೀಡುವ ತೀರ್ಪುಗಳ ಬಗ್ಗೆ ರಚನಾತ್ಮಕ ವಿಮರ್ಶೆ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು. ಅಟಾನಾಮಸ್ ಮಹಿಳಾ ಚಳವಳಿಯ ನೇತಾರೆ ಲಕ್ಷ್ಮೀ ಮೂರ್ತಿ, ‘ಭಾರತೀಯ ನ್ಯಾಯಾಂಗ ವ್ಯವಸ್ಥೆ ವಿರುದ್ಧ ಮಹಿಳೆಯರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಶೇ 49ರಷ್ಟು ಮಹಿಳೆಯರು ದೂರು ನೀಡಲು ಹಿಂಜರಿಯುತ್ತಿದ್ದಾರೆ’ ಎಂದು ತಿಳಿಸಿದರು.

‘ಕಳೆದ ವರ್ಷ ಆರಂಭವಾದ ‘ಮೀ ಟೂ’ ಅಭಿಯಾನ ಮಹಿಳೆ ಯರನ್ನು ಜಾಗೃತಗೊಳಿಸಿತು. ಇದರಿಂದಾಗಿತಮಗಾದ ಅನ್ಯಾಯ ವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ತಪ್ಪಿತಸ್ಥರಿಗೆ ತಡವಾಗಿಯಾದರೂ ಶಿಕ್ಷೆ ದೊರೆಯಬಹುದು ಎಂಬ ವಿಶ್ವಾಸ ಮಹಿಳೆಯರಲ್ಲಿ ಮೂಡಿತ್ತು. ಆದರೆ, ಇದೀಗ ನ್ಯಾಯಾಲಯದ ಒಳಗಡೆಯೇ ಮಹಿಳೆಯರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೋರ್ಟ್ ಮುಂದೆ ಸಿ.ಜೆ ಕೂಡ ಸಾಮಾನ್ಯ’

‘ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧದ ವಿಚಾರಣೆಗೆ ರಚನೆಯಾದ ಆಂತರಿಕ ಸಮಿತಿ ಪಾರದರ್ಶಕವಾಗಿ ನಡೆದುಕೊಂಡಿಲ್ಲ. ಹೀಗಾಗಿ ವರದಿ ಬಹಿರಂಗಪಡಿಸಲು ನಿರಾಕರಿಸಿದೆ. ಈ ಹಿಂದೆ ವಿಶಾಖ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿತ್ತು. ಆದರೆ, ಈ ಪ್ರಕರಣದಲ್ಲಿ ಸತ್ಯವನ್ನು ಹತ್ತಿಕ್ಕುವ ಸಂಚು ಆರಂಭದಿಂದಲೂನಡೆದಿದೆ’ ಎಂದು ರಾಷ್ಟ್ರೀಯಕಾನೂನು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸರಸು ಥಾಮಸ್ ಅಸಮಾಧಾನವ್ಯಕ್ತಪಡಿಸಿದರು.

**

ಲೈಂಗಿಕ ದೌರ್ಜನ್ಯದಂತಹ ಪ್ರಕರಣವನ್ನು ನ್ಯಾಯಾಲಯ ಸೂಕ್ಷ್ಮವಾಗಿ ವಿಚಾರಣೆ ನಡೆಸಬೇಕು. ಇಲ್ಲಿ ನೇರ ಸಾಕ್ಷಿಗಳನ್ನು ಹಾಜರುಪಡಿಸಲು ಸಾಧ್ಯವಿಲ್ಲ
- ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.