ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಆದಿಜಾಂಬವ ಸಂಘದ ಸದಸ್ಯರು ಕೈಗೆ ಕಪ್ಪುಪಟ್ಟಿ ಧರಿಸಿ, ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಸಂಬಂಧ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಬಲಗೈ ಜಾತಿಗಳಿಗೆ ಮರಣ ಶಾಸನವಾಗಿದೆ.ಆಗಸ್ಟ್ 19ರ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯನ್ನು ತಿರಸ್ಕರಿಸಬೇಕು ಇಲ್ಲವೇ ಪರಿಷ್ಕರಿಸಲೇಬೇಕು’ ಎಂದು ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹಿಸಿದರು.
‘ವರದಿಯಲ್ಲಿ ಬಲಗೈ ಸಂಬಂಧಿತ ಸಣ್ಣ ಜಾತಿಗಳನ್ನು ಎಡಗೈ ಸಂಬಂಧಿತ ಜಾತಿಗೆ ಸೇರಿಸಲಾಗಿದೆ. ಇವರಿಗೆ ಅಧಿಕಾರ ಕೊಟ್ಟವರು ಯಾರು? ಎಡಗೈ ಸಮುದಾಯದ ಸೌಲಭ್ಯವನ್ನು ಬಲಗೈ ಸಮುದಾಯ ಕಿತ್ತುಕೊಂಡಿದೆ ಎಂದು ರಾಜ್ಯಕ್ಕೆ ತಪ್ಪು ಸಂದೇಶ ಕೊಡಬಾರದು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಯಾಕೆ? ಗೊಂದಲದ ಗೂಡಾಗಿರುವ ಈ ವರದಿ ತಿರಸ್ಕರಿಸಲು ಯೋಗ್ಯವಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಬಲಗೈ ಸಮುದಾಯವನ್ನು ಕಡೆಗಣಿಸಿದರೆ ನಷ್ಟ ಅನುಭವಿಸಬೇಕಾಗುತ್ತದೆ. ನಾವು ಯಾರ ಹಕ್ಕನ್ನೂ ಕಿತ್ತುಕೊಂಡಿಲ್ಲ. ತ್ಯಾಗ ಮಾಡಿದ್ದೇವೆ. ಯಾವುದೇ ಜಾತಿಗಳ ನಡುವೆ ಹೋರಾಟ ಮಾಡುತ್ತಿಲ್ಲ. ಆಯೋಗದ ವರದಿ ಮತ್ತು ಸರ್ಕಾರದ ವಿರುದ್ಧ ಹೋರಾಟ’ ಎಂದು ಸ್ಪಷ್ಟಪಡಿಸಿದರು.
‘ಬಲಗೈ ಸಮುದಾಯ ಬೀದಿಗೆ ಬರುವ ಪರಿಸ್ಥಿತಿಯನ್ನು ನಾಗಮೋಹನ್ ದಾಸ್ ತಂದಿದ್ದಾರೆ. ಸಣ್ಣ ಜಾತಿಗಳನ್ನು ಮಾದಿಗ ಸಮುದಾಯದ ಗುಂಪಿಗೆ ಸೇರಿಸುವ ಮೂಲಕ ಬಲಗೈ ಸಮುದಾಯದ ಜನಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಿ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಲಾಗಿದೆ’ ಎಂದು ಆರೋಪಿಸಿದರು.
‘ಸಮುದಾಯವನ್ನು ಪ್ರತಿನಿಧಿಸುವ ಸಚಿವರು ಇದ್ದಾರೆ. ಕಾಂಗ್ರೆಸ್ 135 ಸ್ಥಾನ ಪಡೆಯಲು ಈ ಸಮುದಾಯಗಳೇ ಕಾರಣ ಎಂಬುದನ್ನು ಮರೆಯಬಾರದು. ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಸಂಪುಟ ಸಭೆಯಲ್ಲಿ ಒಂದು ವೇಳೆ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿದರೆ, ಒಕ್ಕೂಟದ ವತಿಯಿಂದ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸಂಚಾಲಕರಾದ ಸಿದ್ದಯ್ಯ, ವಾಣಿ ಶಿವರಾಂ, ಬಿಬಿಎಂಪಿ ಮಾಜಿ ಮಹಾಪೌರ ಸಂಪತ್‌ರಾಜ್, ಎಸ್‌ಸಿ-ಎಸ್‌ಟಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಶೇಖರಯ್ಯ, ನಿವೃತ್ತ ಎಂಜಿನಿಯರ್ ಟಿ.ಆರ್.ಶಿವರಾಮು ಉಪಸ್ಥಿತದ್ದರು.
ಆಯೋಗದ ವರದಿ ಜಾರಿಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ. ‘ಯಾವುದೇ ಸಮೀಕ್ಷೆಗಳು ಪರಿಪೂರ್ಣವಲ್ಲ ಎಂಬುದನ್ನೂ ವರದಿಯಲ್ಲಿ ತಿಳಿಸಿದ್ದರೂ ಕೆಲ ಸಮುದಾಯಗಳು ದೋಷಗಳನ್ನು ಮುಂದಿಟ್ಟುಕೊಂಡು ನಾಗಮೋಹನ್ ದಾಸ್ ಆಯೋಗದ ವರದಿಯನ್ನು ವಿರೋಧಿಸಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಒಕ್ಕೂಟದ ಸದಸ್ಯರು ಬೇಸರ ವ್ಯಕ್ತಪಡಿಸಿದರು.
‘ಅಲೆಮಾರಿ ಮಾದಿಗ ತ್ರಿಮತಸ್ಥ ಚರ್ಮಕಾರರು ಹಾಗೂ ಸಂಬಂಧಿತ ಸಮುದಾಯಗಳು ಎಲ್ಲಾ ರೀತಿಯಲ್ಲೂ ಹಿಂದುಳಿದಿವೆ ಎಂದು ವರದಿ ಹೇಳಿದೆ. ಕೆಲವು ದೋಷಗಳು ಉಳಿದುಕೊಂಡಿವೆ. ಇಂತಹ ಸಣ್ಣ ಲೋಪಗಳನ್ನು ಸರಿಪಡಿಸಿಕೊಂಡು ಒಳ ಮೀಸಲಾತಿ ಜಾರಿ ಮಾಡಲು ಸಹಕರಿಸಬೇಕು’ ಎಂದು ಮನವಿ ಮಾಡಿದರು. ಒಕ್ಕೂಟದ ಪ್ರಧಾನ ಸಂಚಾಲಕ ಬಸವರಾಜ ಕೌತಾಳ್ ಮುಖಂಡರಾದ ಅಂಬಣ್ಣ ಅರೋಲಿಕರ್ ಕರಿಯಪ್ಪ ಗುಡಿಮನಿ ಸಣ್ಣ ಮಾರೆಪ್ಪ ಮೊದಲಾದವರು ಪಾಲ್ಗೊಂಡಿದ್ದರು.
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ವತಿಯಿಂದ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು. ‘ರಾಜ್ಯದಲ್ಲಿ ಮಾದಿಗ ಮೋಚಿ ಮಾದಾರ ಮಾಂಗ್ ಮಾತಂಗ ಜಾಡಮಾಲಿ ಚಮ್ಮಾರ ಮಣೆಗಾರ ಆದಿಶೈವ ಆದಿಜಾಂಬವ ಸಮುದಾಯ ಶೈಕ್ಷಣಿಕ ಆರ್ಥಿಕ ರಾಜಕೀಯ ಮತ್ತು ಸಾಮಾಜಿಕವಾಗಿ ಹಿಂದುಳಿದಿವೆ. ಈ ಸಮುದಾಯವು ಚರ್ಮೋದ್ಯೋಗ ಮತ್ತು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ಮೀಸಲಾತಿ ಸವಲತ್ತಿನಿಂದ ವಂಚಿತವಾಗಿವೆ. ಹಾಗಾಗಿ ರಾಜ್ಯ ಸರ್ಕಾರ ಮಾದಿಗ ಸಂಬಂಧಿತ ಸಮುದಾಯಕ್ಕೆ ಶೇಕಡ 6.75ರ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು’ ಎಂದು ಸಂಘದ ಸದಸ್ಯರು ಆಗ್ರಹಿಸಿದರು.
‘ವರದಿ ಅವೈಜ್ಞಾನಿಕವೆಂದು ಬಲಗೈ ಸಮುದಾಯ ತಕರಾರು ತೆಗೆದಿರುವುದು ಸಂವಿಧಾನದ ಭ್ರಾತೃತ್ವದ ನೀತಿಗೆ ವಿರುದ್ಧವಾಗಿದೆ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಲು ವರದಿಯನ್ನು ಅಂಗೀಕರಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಕಾರ್ಯಾಧ್ಯಕ್ಷ ಜಂಬೂದ್ವೀಪ ಸಿದ್ದರಾಜು ಪ್ರಧಾನ ಕಾರ್ಯದರ್ಶಿ ಸಿ.ವಿ.ರಮೇಶ್ ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.