ಬೆಂಗಳೂರು: ನ್ಯಾ. ನಾಗಮೋಹನದಾಸ್ ಆಯೋಗ ಸಲ್ಲಿಸಿರುವ ವರದಿಯು ಅವೈಜ್ಞಾನಿಕ ಹಾಗೂ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿರುವ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಅಧಿಕಾರದ ವ್ಯಾಪ್ತಿ ಮೀರಿ ಕೆಲವು ಅಂಶಗಳನ್ನು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಗೊಂದಲಮಯ ಆಗಿರುವ ವರದಿಯನ್ನು ಪರಿಷ್ಕರಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಿಲ್ಲ. ಮನೆಗಳಿಗೆ ಕೇವಲ ಚೀಟಿಗಳನ್ನು ಅಂಟಿಸುವ ಮೂಲಕ ಆಯೋಗದ ಸಮೀಕ್ಷೆ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಸಮೀಕ್ಷೆಗೆ ಆ್ಯಪ್‌ವೊಂದನ್ನು ಸಿದ್ಧ ಪಡೆಸಲಾಗಿತ್ತು. ಆ ಆ್ಯಪ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಕೆಲವರಿಗೆ ಸಾಧ್ಯವಾಗಿರಲಿಲ್ಲ. ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ಕುಟುಂಬಗಳ ಸಮೀಕ್ಷೆಯನ್ನೂ ನಡೆಸಿಲ್ಲ. ಆದ್ದರಿಂದ, ವರದಿಯನ್ನು ಪರಿಷ್ಕರಿಸಬೇಕು’ ಎಂದು ಮೈಸೂರು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹಿಸಿದರು.
ಆಯೋಗಕ್ಕೆ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳು ಸರಿಯಾಗಿದ್ದರೂ ಸಹ ಆಯೋಗವು ನೀಡಿದ ವರದಿಗೂ, ಸರ್ಕಾರದ ಮಾನದಂಡದ ಆಶಯಗಳಿಗೂ ತಾಳೆಯಾಗಿಲ್ಲ. ಕೆಲವು ಜಾತಿಗಳ ಸಾಕ್ಷರತಾ ಪ್ರಮಾಣವು ಶೇ 60ಕ್ಕಿಂತ ಕಡಿಮೆ ಇದ್ದು ಅವುಗಳನ್ನು ಅತಿ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿ, ಒಳ ಮೀಸಲಾತಿ ಹಂಚಿಕೆಗೆ ತೊಡಕಾಗುವ ರೀತಿಯಲ್ಲಿ ಗೊಂದಲ ಸೃಷ್ಟಿಸಲಾಗಿದೆ ಎಂದು ಪ್ರತಿಭಟನಕಾರರು ಹೇಳಿದರು.
ರಾಜ್ಯ ಸಂಚಾಲಕ ಸಿದ್ದಯ್ಯ, ವಾಣಿ ಶಿವರಾಂ ಸೇರಿದಂತೆ ಹಲವರು ಹಾಜರಿದ್ದರು.
ಒಳಮೀಸಲಾತಿ ವರದಿ ಜಾರಿಗೆ ಆಗ್ರಹಿಸಿ ಧರಣಿ ನಾಗಮೋಹನದಾಸ್ ಆಯೋಗವು ಸಲ್ಲಿಸಿರುವ ವರದಿಯನ್ನು ತಕ್ಷಣವೇ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ(ಮಾದಿಗ ದಂಡೋರ) ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ‘ಒಳಮೀಸಲಾತಿ ವರದಿಯನ್ನು ತಕ್ಷಣವೇ ಜಾರಿ ಮಾಡಬೇಕು. ವರದಿ ಜಾರಿ ಮಾಡದಿದ್ದರೆ ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಪ್ರತಿಭಟನಕಾರರು ಎಚ್ಚರಿಸಿದರು. ಮಾದಿಗ ಹಾಗೂ ಮಾದಿಗ ಉಪ ಜಾತಿಗಳಿಗೆ ಶೇ 7ರಷ್ಟು ಮೀಸಲಾತಿ ಕಲ್ಪಿಸುವ ವರದಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ಬಿ.ನರಸಪ್ಪ ದಂಡೋರ ದೇವರಾಜ್ ರಾಮಕೃಷ್ಣ ಪಾಲ್ಗೊಂಡಿದ್ದರು.
ಒಳಮೀಸಲಾತಿ ವರದಿ: ದೋಷ ಸರಿಪಡಿಸಿ
ನ್ಯಾ.ನಾಗಮೋಹನದಾಸ್ ವರದಿಯಲ್ಲಿರುವ ದೋಷ ಸರಿಪಡಿಸಿ ಅನುಷ್ಠಾನಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಆಗ್ರಹಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿಯಾದ ಒಕ್ಕೂಟದ ಪದಾಧಿಕಾರಿಗಳು ಈ ಕುರಿತು ಮನವಿ ಸಲ್ಲಿಸಿದರು. ನೂರೊಂದು ಪರಿಶಿಷ್ಟ ಸಹೋದರ ಸಮುದಾಯಗಳ ಏಕತೆಯನ್ನು ಕಾಪಾಡಿಕೊಂಡು ಮೀಸಲಾತಿ ಹಂಚಿಕೆಯಲ್ಲಿ ಸಮಪಾಲು ಪಡೆಯುವ ದೃಷ್ಟಿಯಿಂದ ಒಕ್ಕೂಟದ ನೇತೃತ್ವದಲ್ಲಿ ಸಭೆ ನಡೆಸಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಒಳಮೀಸಲಾತಿಗೆ ಸಂಬಂಧಿಸಿದಂತೆ ನೀಡಿರುವ ವರದಿಯಲ್ಲಿ ತಾಂತ್ರಿಕ ದೋಷಗಳಿವೆ. ಅವುಗಳನ್ನು ಪರಿಷ್ಕರಿಸಬೇಕು. ಮೀಸಲಾತಿ ಹಂಚಿಕೆಗಾಗಿ ಮಾಡಿದ ಗುಂಪು ರಚನೆಯಲ್ಲಿ ಕುಟುಂಬ ಮತ್ತು ಸಮುದಾಯಗಳ ಹಿಂದುಳಿದಿರುವಿಕೆಯ ದತ್ತಾಂಶಗಳಲ್ಲಿ ನ್ಯೂನತೆ ಇದೆ. ಇದನ್ನು ಸರಿಪಡಿಸಬೇಕು. ಅನುಷ್ಠಾನದಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಒಕ್ಕೂಟದ ಮನವಿ ಹೇಳಿದೆ. ಮುಖ್ಯಮಂತ್ರಿ ಭೇಟಿಯಾದ ನಿಯೋಗದಲ್ಲಿ ಗುರುಪ್ರಸಾದ್ ಕೆರೆಗೋಡು ಇಂದೂಧರ ಹೊನ್ನಾಪುರ ಮಾವಳ್ಳಿ ಶಂಕರ್ ಎನ್. ವೆಂಕಟೇಶ್ ಎನ್. ಮುನಿಸ್ವಾಮಿ ವಿ. ನಾಗರಾಜ ಅನಂತನಾಯಕ್ ಎನ್. ಎಂ. ವೆಂಕಟೇಶ್ ಆದರ್ಶ ಯಲ್ಲಪ್ಪ ವೆಂಕಟೇಶ್ ವೊರ್ಸೆ ಮೋಹನ್ ಎಳ್ಳಿಕಾರೆ ಮರಿಯಪ್ಪ ಹಳ್ಳಿ ಭಾಗವಹಿಸಿದ್ದರು.
‘ಮಾದಿಗ ಮುಖಂಡರೇ ಬನ್ನಿ’
ಒಳಮೀಸಲಾತಿ ಜಾರಿಯಾಗುವ ಮೂಲಕ ನಮ್ಮ ಬಹುವರ್ಷಗಳ ಕನಸು ನನಸಾಗುತ್ತಿದೆ. ಈ ಸಂದರ್ಭದಲ್ಲಿ ವಿಜಯೋತ್ಸವ ಆಚರಿಸಲು ಮಾದಿಗ ಸಮುದಾಯದ ಮುಖಂಡರು ನೈಜ ಹೋರಾಟಗಾರರು ಆಗಸ್ಟ್ 19ರಂದು ಮಧ್ಯಾಹ್ನ 3ಕ್ಕೆ ಸ್ವಾತಂತ್ರ್ಯ ಉದ್ಯಾನಕ್ಕೆ ಬರಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ. ಒಳ ಮೀಸಲಾತಿ ಜಾರಿಯಾದರೆ ಹಲವು ಅವಕಾಶಗಳು ಸೌಲಭ್ಯಗಳು ಹರಿದು ಬರಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೊಳಿಸುವ ಐತಿಹಾಸಿಕ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.