ADVERTISEMENT

ಮೆಟ್ರೊ ರೈಲು ಪ್ರಯಾಣ ನೂತನ ದಾಖಲೆ

ಶುಕ್ರವಾರ ಒಂದೇ ದಿನ 4.83ಲಕ್ಷ ಜನ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 20:20 IST
Last Updated 26 ಅಕ್ಟೋಬರ್ 2019, 20:20 IST
   

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲಿನಲ್ಲಿ ಶುಕ್ರವಾರ 4.83 ಲಕ್ಷ ಜನ ಪ್ರಯಾಣಿಸಿದ್ದು, ಆ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಂತಾಗಿದೆ. ಈ ಒಂದೇ ದಿನ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ₹1.12 ಕೋಟಿ ಆದಾಯ ಹರಿದು ಬಂದಿದೆ.

ದೀಪಾವಳಿ ಹಾಗೂ ವಾರಾಂತ್ಯದಲ್ಲಿ ಸಾಲು ರಜೆ ಇರುವುದರಿಂದ ಹೆಚ್ಚಿನ ಜನ ತಮ್ಮ ಊರಿಗೆ ತೆರಳಲು ಮೆಜೆಸ್ಟಿಕ್‌ಗೆ ಪ್ರಯಾಣಿಸುವ ವೇಳೆ ಮೆಟ್ರೊ ರೈಲು ಬಳಸಿದ್ದು, ಈ ದಾಖಲೆಗೆ ಕಾರಣ.

ನೇರಳೆ ಮಾರ್ಗದಲ್ಲಿ 2,63,327 ಹಾಗೂ ಹಸಿರು ಮಾರ್ಗದಲ್ಲಿ 2,19,776 ಜನ ಪ್ರಯಾಣಿಸಿದ್ದಾರೆ. ಪರಿಣಾಮ ಕ್ರಮವಾಗಿ ₹54,29,289 ಹಾಗೂ ₹55,81,892 ಹರಿದುಬಂದಿದೆ. ಸಾಮಾನ್ಯ ದಿನಗಳಲ್ಲಿ ಸರಾಸರಿ 4.20ಲಕ್ಷದಿಂದ 4.30 ಲಕ್ಷ ಜನ ಪ್ರಯಾಣಿಸುತ್ತಾರೆ.

ADVERTISEMENT

ಶುಕ್ರವಾರ 274 ಟ್ರಿಪ್‍ಗಳಲ್ಲಿ ರೈಲುಗಳು ಸಂಚರಿಸಿದ್ದು, ಪ್ರತಿ ಟ್ರಿಪ್‍ನಲ್ಲಿ ಸರಾಸರಿ 1,764 ಜನ ಪ್ರಯಾಣಿಸಿದ್ದಾರೆ. ಆರು ಬೋಗಿಗಳ ರೈಲಿನಲ್ಲಿ 1,800ರಿಂದ 1,900 ಜನ ಪ್ರಯಾಣಿಸಿದ್ದು, ಹೆಚ್ಚಾಗಿ ಮೆಜೆಸ್ಟಿಕ್ ಮತ್ತು ಯಶವಂತಪುರ ರೈಲು ನಿಲ್ದಾಣದಲ್ಲಿ ಇಳಿದಿದ್ದಾರೆ. ಅದರಲ್ಲೂ ಸಂಜೆ 6ರಿಂದ 10ರ ಅವಧಿಯಲ್ಲಿ ಎಲ್ಲ ರೈಲುಗಳು ತುಂಬಿ ತುಳುಕುತ್ತಿದ್ದವು.

ಹಸಿರು ಮಾರ್ಗದಲ್ಲಿ ಬಹುತೇಕ ಎಲ್ಲವೂ ಮೂರು ಬೋಗಿಗಳಿದ್ದುದರಿಂದ ಜನದಟ್ಟಣೆ ಎಂದಿಗಿಂತ ಹೆಚ್ಚಿತ್ತು ಎಂದು ನಿಗಮದ ಅಧಿಕಾರಿಗಳು ತಿಳಸಿದರು.

ಕಳೆದ ದಸರಾ ಸಂದರ್ಭದಲ್ಲಿ ಒಂದೇ ದಿನದಲ್ಲಿ 4.64 ಲಕ್ಷ ಜನ ಪ್ರಯಾಸಿದ್ದರು. ಇದರಿಂದ ₹1.20 ಕೋಟಿ ಆದಾಯ ಹರಿದುಬಂದಿತ್ತು. ಇದು ಈವರೆಗಿನ ದಾಖಲೆ ಆಗಿತ್ತು. ಅದಕ್ಕೂ ಮುನ್ನ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಅಂದರೆ ಆ.31ರಂದು 4.58 ಲಕ್ಷ ಮಂದಿಪ್ರಯಾಣಿಸಿದ್ದು, ಪರಿಣಾಮ ₹1.09 ಕೋಟಿ ಆದಾಯ ಹರಿದು ಬಂದಿತ್ತು.

ಮೆಟ್ರೊ ರೈಲಿನಲ್ಲಿ ಶನಿವಾರ ಕೂಡ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.