ಬೆಂಗಳೂರು: ‘ನಮ್ಮ ಮೆಟ್ರೊ’ವನ್ನು ಕೇಂದ್ರ ಸರ್ಕಾರವೊಂದೇ ನಿರ್ಮಿಸಿರುವಂತೆ ಬಿಜೆಪಿ ಬಿಂಬಿಸುತ್ತಿದೆ. ಬಿಜೆಪಿಯ ಶಾಸಕರು ಮತ್ತು ಸಂಸದರು ಯಾವುದೇ ನಾಚಿಕೆ ಇಲ್ಲದೇ ಸತ್ಯವನ್ನು ನಿರ್ಲಕ್ಷಿಸಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.
ರಾಜ್ಯ ಸರ್ಕಾರವು ಬಿಎಂಆರ್‌ಸಿಎಲ್‌ನಲ್ಲಿ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ. ಜಮೀನು ಒದಗಿಸುವುದು, ಒತ್ತುವರಿ ತೆರವುಗೊಳಿಸುವುದು, ಯೋಜನೆಗೆ ಅನುದಾನ ಒದಗಿಸುವುದನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಸಚಿವರು ‘ಎಕ್ಸ್’ ಖಾತೆಯಲ್ಲಿ ತಿಳಿಸಿದ್ದಾರೆ.
ನಮ್ಮ ಮೆಟ್ರೊ ಹಂತ 1ಕ್ಕೆ ಸಂಬಂಧಿಸಿದಂತೆ ಶೇ 30ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಿದೆ. ಕೇಂದ್ರ ಸರ್ಕಾರದ ಪಾಲು ಶೇ 25ರಷ್ಟು. ಉಳಿದಿದ್ದನ್ನು ಸಾಲ ಮೂಲಕ ಭರಿಸಲಾಗಿದೆ. ಹಂತ 2ಕ್ಕೆ ಸಂಬಂಧಿಸಿದಂತೆ ಶೇ 30ರಷ್ಟು ವೆಚ್ಚ ಮತ್ತು ಜಮೀನು ಸಹಿತ ಎಲ್ಲ ವೆಚ್ಚಗಳನ್ನು ರಾಜ್ಯ ಸರ್ಕಾರ ನೀಡಿದೆ. ಕೇಂದ್ರ ಸರ್ಕಾರ ಶೇ 20ರಷ್ಟು ಪಾಲು ನೀಡಿದೆ. ಉಳಿದವುಗಳನ್ನು ಸಾಲರೂಪದಲ್ಲಿ ಪಡೆಯಲಾಗಿದೆ. ಹಂತ 3ಕ್ಕೆ ಸಂಬಂಧಿಸಿ ಕರ್ನಾಟಕವು ಶೇ 20ರಷ್ಟು ಅನುದಾನ ಮತ್ತು ಜಮೀನು ವೆಚ್ಚವನ್ನು ಭರಿಸುತ್ತಿದೆ. ಕೇಂದ್ರ ಸರ್ಕಾರ ಶೇ 20ರಷ್ಟು ನೀಡಲಿದೆ ಎಂದು ವಿವರಿಸಿದ್ದಾರೆ.
ಕೇಂದ್ರ ಸರ್ಕಾರಕ್ಕಿಂತ ಅಧಿಕ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿ ಮಾಡುತ್ತಿದ್ದರೂ ‘ನಮ್ಮ ಮೆಟ್ರೊ’ ಕೇವಲ ಕೇಂದ್ರ ಸರ್ಕಾರದ ಉಡುಗೊರೆ ಎಂದು ನಟಿಸುವ ಮೂಲಕ ಬಿಜೆಪಿ ರಾಜ್ಯವನ್ನು ಅವಮಾನಿಸುತ್ತಿದೆ. ಮೆಟ್ರೊ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ, ಜನರಿಗೆ ಸೇರಿದ್ದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.