ADVERTISEMENT

ನಮ್ಮ ಮೆಟ್ರೊ: ಮುಂದಿನ ಸಾರಥಿ ಯಾರು ?

ಬಿಎಂಆರ್‌ಸಿಎಲ್‌ ಎಂ.ಡಿ ಅಜಯ್‌ ಸೇಠ್‌ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 21:20 IST
Last Updated 6 ಏಪ್ರಿಲ್ 2021, 21:20 IST
ಅಜಯ್‌ ಸೇಠ್‌
ಅಜಯ್‌ ಸೇಠ್‌   

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಜಯ್‌ ಸೇಠ್‌ ವರ್ಗಾವಣೆಗೊಂಡಿದ್ದಾರೆ.

ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಮಂಗಳವಾರ ಅವರು ನೇಮಕಗೊಂಡಿದ್ದಾರೆ. ಈಗಿನ ಹುದ್ದೆಯಿಂದ ಮುಂದಿನ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಈ ಸ್ಥಾನಕ್ಕೆ ಯಾರು ಬರಬಹುದು ಎಂಬ ಚರ್ಚೆ ಶುರುವಾಗಿದ್ದು, ಸದ್ಯ ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ರಾಕೇಶ್ ಸಿಂಗ್ ಅವರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಹಿಂದೆ ಜಲಮಂಡಳಿಯ ಅಧ್ಯಕ್ಷರಾಗಿದ್ದ ಮತ್ತು ಈಗ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ತುಷಾರ್ ಗಿರಿನಾಥ್ ಅವರ ಹೆಸರೂ ಕೇಳಿ ಬರುತ್ತಿದೆ.

ಕರ್ನಾಟಕ ಕೇಡರ್ 1987ರ ಬ್ಯಾಚ್‌ನ ಅಜಯ್ ಸೇಠ್, 2018ರ ಜುಲೈನಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಎರಡೂವರೆ ವರ್ಷದಲ್ಲಿ ‘ನಮ್ಮ ಮೆಟ್ರೊ’ ಎರಡನೇ ಹಂತದ ಮೊದಲ ವಿಸ್ತರಿಸಿದ ಮಾರ್ಗ (ಯಲಚೇನಹಳ್ಳಿ–ರೇಷ್ಮೆ ಸಂಸ್ಥೆ) ಲೋಕಾರ್ಪಣೆಗೊಂಡಿತ್ತು.

ಇದೇ ಸಂದರ್ಭದಲ್ಲಿ ಅನುಮೋದನೆಗೊಂಡರೂ ನನೆಗುದಿಗೆ ಬಿದ್ದಿದ್ದ ಸುರಂಗ ಮಾರ್ಗದ ಸುಮಾರು ₹6 ಸಾವಿರ ಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು ಇವರ ಅವಧಿಯಲ್ಲಿ.

ಸೇಠ್‌ ಆಗಷ್ಟೇ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ವೆಲ್ಲಾರ ಜಂಕ್ಷನ್-ಟ್ಯಾನರಿ ರಸ್ತೆ (ಪ್ಯಾಕೇಜ್ 2 ಮತ್ತು 3)ವರೆಗೆ ಟೆಂಡರ್ ಆದೇಶಿಸಲಾಗಿತ್ತು. ಆದರೆ, ಅದರಲ್ಲಿ ಅಂದಾಜು ವೆಚ್ಚಕ್ಕಿಂತ ಶೇ. 80ರಷ್ಟು ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರು ನಮೂದಿಸಿದ್ದರು. ಅದನ್ನು ರದ್ದುಗೊಳಿಸಿ, ಕೆಲವು ಮಾರ್ಪಾಡುಗಳೊಂದಿಗೆ ಮರುಟೆಂಡರ್‌ಗೆ ಸೂಚಿಸಿದರು. ಪರಿಣಾಮ ಅಂದಾಜು ವೆಚ್ಚಕ್ಕಿಂತ ಕೇವಲ ಶೇ. 10-15ರಷ್ಟು ಹೆಚ್ಚು ಮೊತ್ತವನ್ನು ಗುತ್ತಿಗೆದಾರರು ನಮೂದಿಸಿದರು. ಇದರಿಂದ ನಿಗಮಕ್ಕೆ ಸಾವಿರಾರು ಕೋಟಿ ರೂಪಾಯಿ ಉಳಿತಾಯ ಆಯಿತು.

ಈಗ ಕೆಂಗೇರಿ ಮಾರ್ಗ ಜೂನ್‌ನಲ್ಲಿ ಲೋಕಾರ್ಪಣೆಗೆ ಸಿದ್ಧಗೊಂಡಿರುವುದು ಸೇರಿದಂತೆ ಹಲವು ಮೈಲುಗಲ್ಲು ಸಾಧಿಸಲು ಇವರ ಅವಧಿಯಲ್ಲಿ ಸಾಧ್ಯವಾಯಿತು ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ. ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಆರಂಭವಾದ ದಿನವೇ ಸೇಠ್‌ ಅವರ ವರ್ಗಾವಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.