ADVERTISEMENT

ನಮ್ಮ ಮೆಟ್ರೊ: ಎರಡು ಪ್ಯಾಕೇಜ್‌ಗಳಲ್ಲಿ ನಿರ್ಮಾಣ

18 ಕಿ.ಮೀ. ಉದ್ದದ ಒಆರ್‌ಆರ್‌ ಮಾರ್ಗ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 20:35 IST
Last Updated 14 ಅಕ್ಟೋಬರ್ 2020, 20:35 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಹೊರವರ್ತುಲ ರಸ್ತೆಯ 18 ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಣಕಾಸು ಟೆಂಡರ್‌ ತೆರೆಯಲಾಗಿದೆ.

ಆಫ್ಕಾನ್ಸ್‌ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ, ಶಂಕರನಾರಾಯಣ ಕನ್‌ಸ್ಟ್ರಕ್ಷನ್, ಐಟಿಡಿ, ಎಲ್ ಆ್ಯಂಡ್ ಟಿ, ಜಿ.ಆರ್. ಇನ್‌ಫ್ರಾ, ಎನ್‌ಸಿಸಿ ಕಂಪನಿಗಳು ಕೂಡ ಪ್ಯಾಾಕೇಜ್ 1 ಮತ್ತು 2ರ ಟೆಂಡರ್‌ನಲ್ಲಿ ಭಾಗವಹಿಸಿದ್ದವು. ಹಣಕಾಸು ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕನಿಷ್ಠ ದರ ಬಿಡ್ ಮಾಡಿದ ಕಂಪನಿಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಆಫ್ಕಾನ್ಸ್ ಮತ್ತು ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಂಪನಿಗಳು ಅತ್ಯಂತ ಕಡಿಮೆ ಮೊತ್ತ ಬಿಡ್ ಮಾಡಿದ್ದು, ಸೆಂಟ್ರಲ್ ಸಿಲ್ಕ್‌ ಬೋರ್ಡ್- ಕೆ.ಆರ್. ಪುರ ನಡುವಿನ ಮಾರ್ಗದ ನಿರ್ಮಾಣ ಕಾಮಗಾರಿಯನ್ನು ಎರಡು ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳ
ಲಿವೆ. ಆದರೆ, ಕನಿಷ್ಠ ದರ ಬಿಡ್ ಮಾಡಿದ ಕಂಪನಿಗಳಿಗೆ ಕೇಂದ್ರದ ಅನುಮತಿ ನಂತರವೇ ಕಾರ್ಯಾದೇಶ ಪತ್ರ ಸಿಗಲಿದೆ.

ADVERTISEMENT

ಮುಂಬೈಯ ಆಫ್ಕಾನ್ಸ್‌ ಕಂಪನಿಯು ಪ್ಯಾಕೇಜ್- 1 ಅಂದರೆ ಸೆಂಟ್ರಲ್ ಸಿಲ್ಕ್‌ ಬೋರ್ಡ್‌, ಎಚ್‌ಎಸ್‌ಆರ್ ಲೇಔಟ್, ಅಗರ, ಇಬ್ಬಲೂರು, ಬೆಳ್ಳಂದೂರು ಮತ್ತು ಕಾಡುಬೀಸನಹಳ್ಳಿವರೆಗಿನ 9.8 ಕಿ.ಮೀ. ಮಾರ್ಗವನ್ನು ನಿರ್ಮಿಸುವುದಾಗಿ ಹೇಳಿಕೊಂಡಿದೆ. ಇದರಲ್ಲಿ ಆರು ನಿಲ್ದಾಣಗಳ ನಿರ್ಮಾಣವೂ ಸೇರಿದ್ದು, ₹731 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಗುತ್ತಿಗೆಯು ಸಿಲ್ಕ್‌ ಬೋರ್ಡ್ ಬಳಿ ಬರುವ 2.84 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣವನ್ನೂ ಒಳಗೊಂಡಿದೆ. ಅದೇ ರೀತಿ, ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಂಪನಿಯು ಪ್ಯಾಕೇಜ್- 2ರಲ್ಲಿ ಬರುವ ಮಾರತ್ತಹಳ್ಳಿ, ಇಸ್ರೊ, ದೊಡ್ಡನೆಕ್ಕುಂದಿ, ಡಿಆರ್‌ಡಿಒ ಕ್ರೀಡಾಂಗಣ ಸಂಕೀರ್ಣ, ಸರಸ್ವತಿ ನಗರ ಮತ್ತು ಕೆ.ಆರ್. ಪುರ ನಿಲ್ದಾಣ ಸೇರಿದಂತೆ 9.77 ಕಿ.ಮೀ. ಉದ್ದದ ಮಾರ್ಗವನ್ನು ₹623 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಡಲು ಮುಂದೆ ಬಂದಿದೆ. ಈ ಗುತ್ತಿಗೆ 1.09 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ ಡಿಪೊ ನಿರ್ಮಾಣವನ್ನೂ ಒಳಗೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.