ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನ ನಾಗವಾರ- ಗೊಟ್ಟಿಗೆರೆ ಮಾರ್ಗದ ಹಲವು ಕಡೆ ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್ಸಿಎಲ್) ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಈ ಅನುಮತಿ ನೀಡಿತು. ತೆರವುಗೊಳಿಸುವ ಮರಗಳಿಗೆ ಪರ್ಯಾಯವಾಗಿ ನೆಡಲಾಗುವ ಸಸಿಗಳ (ಅರಣ್ಯೀಕರಣ) ವಿವರ ಒಳಗೊಂಡ ವರದಿ ನೀಡುವಂತೆಯೂ ಸೂಚಿಸಿತು.
ತಜ್ಞರ ಸಮಿತಿ ಸಲಹೆಯಂತೆ ನಿಗಮವು ಮೆಟ್ರೊ ನಿರ್ಮಾಣಕ್ಕಾಗಿ ಈ ಮಾರ್ಗದಲ್ಲಿ ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ನ್ಯಾಯಾಲಯದ ಅನುಮತಿ ಕೋರಿತ್ತು. ಅಲ್ಲದೆ, 2021ರ ಮಾರ್ಚ್ನಿಂದ ಮೇ ತಿಂಗಳ ಅವಧಿಯಲ್ಲಿ ಈ ಕುರಿತು ಹಲವು ಅಧಿಸೂಚನೆಗಳನ್ನೂ ಹೊರಡಿಸಿತ್ತು.
‘ಮರಗಳನ್ನು ಸ್ಥಳಾಂತರಿಸುವ ವೇಳೆ ತಾನು ನೇಮಿಸಿದ ಅಧಿಕಾರಿ ಅಥವಾ ವೃಕ್ಷ ಅಧಿಕಾರಿಯು ಹಾಜರಿರಬೇಕು. ಮರಗಳ ನಿರ್ವಹಣೆ ಮತ್ತು ಸಂರಕ್ಷಣೆ ಕುರಿತಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಬಿಎಂಆರ್ಸಿಎಲ್ನಿಂದ ಮಾಹಿತಿ ಪಡೆದು, ಆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದೂ ಪೀಠವು ನಿರ್ದೇಶಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.