ADVERTISEMENT

ಮೆಟ್ರೊ ಎರಡನೇ ಹಂತ: ಸುರಂಗ ಕೊರೆಯಲು 9 ಯಂತ್ರ ಬಳಕೆ

ಗೊಟ್ಟಿಗೆರೆ–ನಾಗವಾರದಲ್ಲಿ ನಿಲ್ದಾಣಗಳ ನಿರ್ಮಾಣಕ್ಕೆ ಚಾಲನೆ

ಗುರು ಪಿ.ಎಸ್‌
Published 21 ಜೂನ್ 2019, 19:48 IST
Last Updated 21 ಜೂನ್ 2019, 19:48 IST
   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಯಲ್ಲಿ ಗೊಟ್ಟಿಗೆರೆ–ನಾಗವಾರ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಸುರಂಗ ಕೊರೆಯುವ 9 ಯಂತ್ರಗಳನ್ನು (ಟಿಬಿಎಂ) ಬಳಸಲಾಗುತ್ತದೆ.

‘ನಾಲ್ಕು ಪ್ಯಾಕೇಜ್‌ಗಳಲ್ಲಿ ಕೆಲಸ ನಿರ್ವಹಿಸಲಾಗುತ್ತದೆ. ಇದಕ್ಕಾಗಿ ಒಟ್ಟು 9 ಟಿಬಿಎಂಗಳನ್ನು ಬಳಸಲಿದ್ದೇವೆ. ಈ ಪೈಕಿ, ಎರಡು ಪ್ಯಾಕೇಜ್‌ಗಳಿಗೆ ನಾಲ್ಕು ಟಿಬಿಎಂಗಳನ್ನು ಬಳಸಲಾಗುವುದು. ಪ್ಯಾಕೇಜ್‌ 2 ಮತ್ತು ಪ್ಯಾಕೇಜ್‌ 3ರ ಗುತ್ತಿಗೆಯನ್ನು ಎಲ್‌ ಅಂಡ್‌ ಟಿ ತೆಗೆದುಕೊಂಡಿದೆ. ಪ್ಯಾಕೇಜ್‌ 1 ಮತ್ತು 4ರ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌)ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶವಂತ ಚವಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

2023ರ ವೇಳೆಗೆ ಈ ಮಾರ್ಗದ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ADVERTISEMENT

ವೆಲ್ಲಾರ ಜಂಕ್ಷನ್‌ನಿಂದ ಪಾಟರಿ ಟೌನ್‌ವರೆಗೆ ಸುರಂಗ ಮಾರ್ಗ ನಿರ್ಮಿಸಲು ಎಲ್‌ ಅಂಡ್‌ ಟಿ ಕಂಪನಿ ಗುತ್ತಿಗೆ ಪಡೆದಿದೆ. ಇನ್ನೆರಡು ಪ್ಯಾಕೇಜ್‌ಗಳಿಗೆ (ಡೈರಿ ವೃತ್ತದಿಂದ ವೆಲ್ಲಾರ ಜಂಕ್ಷನ್‌ ಮತ್ತು ಪಾಟರಿ ಟೌನ್‌ನಿಂದ ನಾಗವಾರ) ಟೆಂಡರ್‌ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

‘ವೆಲ್ಲಾರ ಜಂಕ್ಷನ್‌ ಮತ್ತು ಇತರೆ ಕಡೆಗಳಲ್ಲಿ ಕೆಲಸ ಪ್ರಾರಂಭವಾಗಿದೆ. ಸುರಂಗ ಕೊರೆಯಲು ಗುತ್ತಿಗೆದಾರರು ಟಿಬಿಎಂಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ನಿಯೋಜನೆ ಮಾಡಲಿದ್ದಾರೆ’ ಎಂದರು.

ನಾಲ್ಕು ಟಿಬಿಎಂಗಳು ಶಿವಾಜಿನಗರದಿಂದ ಮೂರು ತಿಂಗಳಲ್ಲಿ ಕಾರ್ಯ ಪ್ರಾರಂಭಿಸಲಿವೆ. ಎರಡು ಟಿಬಿಎಂಗಳು ವೆಲ್ಲಾರ ಜಂಕ್ಷನ್‌ ಕಡೆಗೆ, ಇನ್ನೆರಡು ಕಂಟೋನ್ಮೆಂಟ್‌ ನಿಲ್ದಾಣದ ಕಡೆಯಲ್ಲಿ ಕೆಲಸ ಮಾಡಲಿವೆ.

‘ಮೊದಲ ಎರಡು ಪ್ಯಾಕೇಜ್‌ನ ಗುತ್ತಿಗೆದಾರರು ಕಟ್ಟಡಗಳ ಸ್ಥಿತಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಮೊದಲ ಹಂತದ ಯೋಜನೆಯಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ, ಅದೇ ರೀತಿ ಈ ಹಂತದಲ್ಲಿಯೂ ಮುನ್ನೆಚ್ಚರಿಕೆ ವಹಿಸಲಾಗುವುದು. ಕಟ್ಟಡಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಅಗತ್ಯವಿರುವೆಡೆಯಲ್ಲಿ ಪುನರ್‌ವಸತಿ ಕಲ್ಪಿಸಲಾಗುವುದು’ ಎಂದು ಅವರು ತಿಳಿಸಿದರು.

ವಿಳಂಬವಾದರೆ ಹೊರೆ: ಮೊದಲ ಹಂತದಲ್ಲಿ, ಸಂಪಿಗೆ ರಸ್ತೆಯಿಂದ ನ್ಯಾಷನಲ್‌ ಕಾಲೇಜು ಮತ್ತು ಚಿನ್ನ ಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆಯವರೆಗೆ 8.82 ಕಿ.ಮೀ. ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಆರು ಟಿಬಿಎಂಗಳನ್ನು ಬಳಸಲಾಗಿತ್ತು. ದೊಡ್ಡ ಬಂಡೆ ಗಳು ಅಡ್ಡ ಬಂದಿದ್ದು, ಟಿಬಿಎಂಗಳು ಹಾನಿಯಾಗಿದ್ದು ಹಾಗೂ ಮತ್ತಿತರ ಕಾರಣಗಳಿಂದ ಸುರಂಗ ಕೊರೆಯುವ ಕಾಮಗಾರಿ ಹಲವು ವರ್ಷ ತಡವಾಗಿತ್ತು. ಈ ಕಾಮಗಾರಿ ಪೂರ್ಣಗೊಳಿಸಲು ಬಿಎಂಆರ್‌ಸಿಎಲ್‌ ಐದು ವರ್ಷಕ್ಕೂ ಹೆಚ್ಚು ಕಾಲ ತೆಗೆದುಕೊಂಡಿತ್ತು.

ಗೊಟ್ಟಿಗೆರೆ–ನಾಗವಾರ ಮಾರ್ಗಕ್ಕೆ 2014ರ ಫೆಬ್ರುವರಿಯಲ್ಲೇ ಮಂಜೂರಾತಿ ಸಿಕ್ಕಿತ್ತು. ಈಗ ಕಾಮಗಾರಿ ಆರಂಭವಾಗಿದೆ. ಇನ್ನೂ ಎರಡು ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.

2021ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಹೇಳಿತ್ತು. ಆ ಗಡುವು ಈಗ 2023ಕ್ಕೆ ಹೋಗಿದೆ.

ಅಂಕಿ ಅಂಶ
* 21.25 ಕಿ.ಮೀ. -ಗೊಟ್ಟಿಗೆರೆ–ನಾಗವಾರ ಮಾರ್ಗದ ಒಟ್ಟು ಉದ್ದ
* 13.79 ಕಿ.ಮೀ. -ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ಸುರಂಗ ಮಾರ್ಗದ ಉದ್ದ
* ₹11,500 ಕೋಟಿ -ಗೊಟ್ಟಿಗೆರೆಯಿಂದ ನಾಗವಾರ ಮಾರ್ಗ ನಿರ್ಮಾಣ ವೆಚ್ಚ (ಎಲಿವೇಟೆಡ್‌ ಸಹಿತ)
* 12 -ನೆಲದಡಿ ನಿಲ್ದಾಣಗಳು
* 6 -ಎತ್ತರಿಸಿದ ನಿಲ್ದಾಣಗಳು
* 300 -ನೆಲದಡಿ ನಿಲ್ದಾಣಗಳ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್‌ ಸ್ವಾಧೀನಪಡಿಸಿಕೊಂಡಿರುವ ಆಸ್ತಿ ಅಥವಾ ಕಟ್ಟಡಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.