ADVERTISEMENT

ನಮ್ಮ ಮೆಟ್ರೊ ಕಿತ್ತಳೆ ಮಾರ್ಗಕ್ಕೆ ಭೂಸ್ವಾಧೀನ: ಸಂತ್ರಸ್ತರೊಂದಿಗೆ ಸಮಾಲೋಚನೆ

ನಮ್ಮ ಮೆಟ್ರೊ: ಕೆಂಪಾಪುರ–ಜೆ.ಪಿ.ನಗರ 4ನೇ ಹಂತ, ಹೊಸಹಳ್ಳಿ–ಕಡಬಗೆರೆ ಸಂಪರ್ಕ ಮಾರ್ಗ

ಬಾಲಕೃಷ್ಣ ಪಿ.ಎಚ್‌
Published 6 ಆಗಸ್ಟ್ 2025, 23:30 IST
Last Updated 6 ಆಗಸ್ಟ್ 2025, 23:30 IST
ನಮ್ಮ ಮೆಟ್ರೊ ಮೂರನೇ ಹಂತದ (ಕಿತ್ತಳೆ ಮಾರ್ಗ) ಎರಡು ಕಾರಿಡಾರ್‌ಗಳು
ನಮ್ಮ ಮೆಟ್ರೊ ಮೂರನೇ ಹಂತದ (ಕಿತ್ತಳೆ ಮಾರ್ಗ) ಎರಡು ಕಾರಿಡಾರ್‌ಗಳು   

ಬೆಂಗಳೂರು: ನಮ್ಮ ಮೆಟ್ರೊ 3ನೇ ಹಂತದ (ಕಿತ್ತಳೆ ಮಾರ್ಗ) ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದ್ದು, ಕಾರಿಡಾರ್‌ 1ಕ್ಕೆ ಸಂಬಂಧಪಟ್ಟ ಪ್ರಕ್ರಿಯೆ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರ ಸಾಮಾಜಿಕ ಪರಿಣಾಮಗಳ ಬಗ್ಗೆ ಬಾಧಿತ ಪಾಲುದಾರರೊಂದಿಗೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸಮಾಲೋಚನಾ ಸಭೆಗಳನ್ನು ಆರಂಭಿಸಿದ್ದಾರೆ.

ಕೆಂಪಾಪುರ–ಜೆ.ಪಿ.ನಗರ 4ನೇ ಹಂತ ಮೊದಲ ಕಾರಿಡಾರ್‌ ಆಗಿದ್ದು, ಹೊಸಹಳ್ಳಿ–ಕಡಬಗೆರೆ ಎರಡನೇ ಕಾರಿಡಾರ್‌ ಆಗಿದೆ. ಒಂದನೇ ಕಾರಿಡಾರ್‌ ಮೂರು ಪ್ಯಾಕೇಜ್‌ಗಳಲ್ಲಿ ನಿರ್ಮಾಣಗೊಳ್ಳಲಿದೆ. ಎರಡನೇ ಕಾರಿಡಾರ್ ನಾಲ್ಕನೇ ಪ್ಯಾಕೇಜ್‌ ಆಗಿದೆ. ಇವುಗಳಿಗೆ ಸಂಬಂಧಿಸಿದಂತೆ ಮೊದಲು ತಯಾರಿಸಿದ್ದ ವಿಸ್ತೃತ ಯೋಜನಾ ವರದಿಯಲ್ಲಿ ಡಬಲ್ ಡೆಕರ್‌ ಸೇರ್ಪಡೆಗೊಂಡಿರಲಿಲ್ಲ. ಅದಕ್ಕಾಗಿ ಮರು ಸರ್ವೆ ಶುರುವಾಗಿತ್ತು.

ಮೊದಲ ಪ್ಯಾಕೇಜ್‌ ಜೆ.ಪಿ.ನಗರ 4ನೇ ಹಂತದಿಂದ ಮೈಸೂರು ರಸ್ತೆಯ ಸರ್ವೆ ಮುಗಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಕಂಠೀರವ ಸ್ಟೇಡಿಯಂನಿಂದ ಕೆಂಪಾಪುರದವರೆಗಿನ 3ನೇ ಪ್ಯಾಕೇಜ್‌ನಲ್ಲಿ 100 ಆಸ್ತಿಗಳನ್ನು ಗುರುತಿಸಲಾಗಿದೆ. ಮೈಸೂರು ರಸ್ತೆ–ಕಂಠೀರವ ಸ್ಟೇಡಿಯಂವರೆಗಿನ ಎರಡನೇ ಪ್ಯಾಕೇಜ್‌ನ ಸರ್ವೆ ನಡೆಯುತ್ತಿದೆ. ಈ ಎಲ್ಲ ಕಾರ್ಯಗಳು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು 3ನೇ ಹಂತದ 1ನೇ ಕಾರಿಡಾರ್‌ನ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಪೂರ್ಣಿಮಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಭೆಗಳು: ಸಂತ್ರಸ್ತರೊಂದಿಗೆ ಆ.4ರಿಂದ ಸಮಾಲೋಚನಾ ಸಭೆಗಳು ಶುರುವಾಗಿವೆ. ಕಾರಿಡಾರ್‌–2ಕ್ಕೆ (ನಾಲ್ಕನೇ ಪ್ಯಾಕೇಜ್‌) ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯದ ಪೂಜಾ ಕನ್ವೆನ್ಶನ್‌ ಹಾಲ್‌, ವಿಜಯನಗರದ ಜಿ.ಬಿ.ಬಿ. ಕಲ್ಯಾಣ ಮಹಲ್‌ ಹಾಗೂ ದೊಡ್ಡ ಗೊಲ್ಲರಹಟ್ಟಿ ರವಿನಂದನ ಪ್ಯಾಲೆಸ್‌ನಲ್ಲಿ ಸಭೆಗಳು ನಡೆದಿವೆ. 

ಶ್ರೀಗಂಧದ ಕಾವಲ್‌ನ ಶಿವಾನಂದಿ ಕನ್ವೆನ್ಶನ್‌ ಹಾಲ್‌, ನಾಗರಭಾವಿಯ ಅಮ್ಮಾ ಪಾರ್ಟಿ ಹಾಲ್‌ನಲ್ಲಿ ಕಾರಿಡಾರ್‌ 1ರ ಪ್ಯಾಕೇಜ್‌ 2ಕ್ಕೆ ಸಂಬಂಧಿಸಿದಂತೆ ಸಭೆಗಳಾಗಿವೆ. ಆ.11ರಂದು ಬೆಳಿಗ್ಗೆ 10.30ಕ್ಕೆ ಲಗ್ಗೆರೆಯ ಮಂಜುಶ್ರೀ ಫಂಕ್ಷನ್‌ ಹಾಲ್‌ನಲ್ಲಿ ಕೊನೇ ಸಭೆ ನಡೆಯಲಿದೆ.

ಕಾರಿಡಾರ್‌ 1ರ ಪ್ಯಾಕೇಜ್‌ 1ಕ್ಕೆ ಸಂಬಂಧಿಸಿದವರ ಸಭೆ ಹೊರವರ್ತುಲ ರಸ್ತೆಯ ಎಂ.ಆರ್‌. ಕನ್ವೆನ್ಶನ್‌ ಹಾಲ್‌ನಲ್ಲಿ  ನಡೆದಿದ್ದು, ಆ.9ರಂದು ಬೆಳಿಗ್ಗೆ 10.30ಕ್ಕೆ ಸಿಂಧೂರ್‌ ಕನ್ವೆನ್ಶನ್‌ ಹಾಲ್‌ನಲ್ಲಿ, ಮಧ್ಯಾಹ್ನ 2ಕ್ಕೆ ಪದ್ಮನಾಭನಗರದ ಬೆಂಗಳೂರು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯಲ್ಲಿ ಅಂತಿಮ ಸಭೆಗಳು ನಡೆಯಲಿವೆ. 

ಆ.7ರಂದು ಬೆಳಿಗ್ಗೆ 10.30ಕ್ಕೆ ಸಂಜಯನಗರದ ರಘೋತ್ತಮ ಪಾರ್ಟಿ ಹಾಲ್‌ನಲ್ಲಿ (ಮಾರಿಗೋಲ್ಡ್‌) ಪ್ಯಾಕೇಜ್‌ ಮೂರಕ್ಕೆ ಸಂಬಂಧಿಸಿದ ಸಭೆ ನಡೆಯಲಿದೆ ಎಂದು ನಮ್ಮ ಮೆಟ್ರೊ 3ನೇ ಹಂತ 2ನೇ ಕಾರಿಡಾರ್‌ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಯತೀಶ್‌ ಉಲ್ಲಾಳ್‌ ಮಾಹಿತಿ ನೀಡಿದರು.

ಕಾರಿಡಾರ್‌–2ಕ್ಕೆ ಸಂಬಂಧಿಸಿದಂತೆ ಸರ್ವೆ ನಡೆಯುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆ 8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಏಕವ್ಯಕ್ತಿ ಸಮಿತಿಯಿಂದ ಪರಿಹಾರ ನಿರ್ಧಾರ

ಜಮೀನಿಗೆ ಮತ್ತು ಈ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳಿಗೆ ಎಷ್ಟು ಪರಿಹಾರ ನೀಡಬೇಕು ಎಂಬುದನ್ನು ಏಕವ್ಯಕ್ತಿ ಸಮಿತಿ ನಿರ್ಧಾರ ಮಾಡಲಿದೆ. ಬಿಎಂಆರ್‌ಸಿಎಲ್‌ ಇಲ್ಲಿವರೆಗೆ ಅತ್ಯುತ್ತಮ ಪರಿಹಾರವನ್ನು ನೀಡಿದೆ. ಮೂರನೇ ಹಂತದಲ್ಲಿಯೂ ಭೂಸಂತ್ರಸ್ತರಿಗೆ ಉತ್ತಮ ಪರಿಹಾರ ಸಿಗಲಿದೆ ಎಂದು ನಮ್ಮ ಮೆಟ್ರೊ ಹಂತ ಮೂರರ 2ನೇ ಕಾರಿಡಾರ್‌ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಯತೀಶ್‌ ಉಲ್ಲಾಳ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.