ADVERTISEMENT

ನಮ್ಮ ಮೆಟ್ರೊ: ಎರಡು ತಿಂಗಳಲ್ಲಿ ಸುರಂಗ ಮಾರ್ಗ ಪೂರ್ಣ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 16:08 IST
Last Updated 1 ಆಗಸ್ಟ್ 2024, 16:08 IST
ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ಸುರಂಗ ಮಾರ್ಗ ನಿರ್ಮಾಣವಾಗಿರುವುದು
ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ಸುರಂಗ ಮಾರ್ಗ ನಿರ್ಮಾಣವಾಗಿರುವುದು   

ಬೆಂಗಳೂರು: ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಭರದಿಂದ ಸಾಗಿದ್ದು, ಜುಲೈ ಒಂದೇ ತಿಂಗಳಲ್ಲಿ 308 ಮೀಟರ್‌ ಕೊರೆದಿದೆ. ನಿರ್ಮಾಣಗೊಳ್ಳುತ್ತಿರುವ ಒಟ್ಟು 20.99 ಕಿಲೋಮೀಟರ್‌ ಸುರಂಗ ಮಾರ್ಗದಲ್ಲಿ ಇನ್ನು ಒಂದು ಕಿ.ಮೀ. ಮಾತ್ರ ಬಾಕಿ ಉಳಿದಿದೆ.

ಹಂತ– 2ರ ಯೋಜನೆಯಡಿ ರೀಚ್‌–6 ಮಾರ್ಗ ಇದಾಗಿದ್ದು, ‘ವರದ’, ‘ಅವನಿ’, ‘ಊರ್ಜ್ವಾ’, ‘ವಿಂಧ್ಯಾ’, ‘ಲವಿ’, ‘ವಮಿಕ’, ‘ರುದ್ರ’ ಸುರಂಗ ಕೊರೆಯುವ ಯಂತ್ರಗಳು ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗದಲ್ಲಿ ಒಂಬತ್ತು ಸುರಂಗಗಳ ಕೊರೆಯುವ ಕಾರ್ಯವನ್ನು ಪೂರ್ಣಗೊಳಿಸಿವೆ. ‘ತುಂಗಾ’ ಮತ್ತು ‘ಭದ್ರಾ’ ಯಂತ್ರಗಳು ಕೊನೇ ಹಂತದ ಸುರಂಗ ಕೊರೆಯುತ್ತಿವೆ. ‘ಭದ್ರಾ’ 624 ಮೀಟರ್‌ ಮತ್ತು ‘ತುಂಗಾ’ 469 ಮೀಟರ್‌ ಕೊರೆಯಲು ಬಾಕಿ ಉಳಿದಿದೆ. ಇನ್ನೆರಡು ತಿಂಗಳಲ್ಲಿ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ, ಸ್ವಾಗತ್‌ ರೋಡ್‌ ಕ್ರಾಸ್‌, ಡೇರಿ ಸರ್ಕಲ್‌, ಮೈಕೊ ಇಂಡಸ್ಟ್ರೀಸ್‌, ಲ್ಯಾಂಗ್‌ಫೋರ್ಡ್‌ ಟೌನ್‌, ವೆಲ್ಲಾರ, ಎಂ.ಜಿ. ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್‌, ಪಾಟರಿ ಟೌನ್‌, ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್‌ ಕಾಲೇಜು, ನಾಗವಾರದಲ್ಲಿ ಮೆಟ್ರೊ ನಿಲ್ದಾಣಗಳು ನಿರ್ಮಾಣಗೊಳ್ಳುತ್ತಿವೆ. 2025ರ ಅಂತ್ಯಕ್ಕೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.