ಬೆಂಗಳೂರು: ಹಳದಿ ಮಾರ್ಗ ಉದ್ಘಾಟನೆಗೊಂಡ ಬಳಿಕ ನಮ್ಮ ಮೆಟ್ರೊ ಪ್ರಯಾಣಿಕರ ಒಟ್ಟು ಸಂಖ್ಯೆ 1.5 ಲಕ್ಷ ಹೆಚ್ಚಾಗಿದೆ. ಹಸಿರು ಮಾರ್ಗ ಮತ್ತು ಹಳದಿ ಮಾರ್ಗ ಸೇರುವ ಆರ್.ವಿ. ರಸ್ತೆಯ ಇಂಟರ್‌ಚೇಂಜ್ ನಿಲ್ದಾಣದ ಪ್ಲಾಟ್‌ಫಾರ್ಮ್ ಸಣ್ಣದಾಗಿದೆ. ದಟ್ಟಣೆ ಅವಧಿಯಲ್ಲಿ ಕಾಲಿಡಲು ಜಾಗ ಇಲ್ಲದಂತಾಗಿದೆ.
ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಹೊರಡುವ ರೈಲಿಗೆ ಆರ್.ವಿ. ರಸ್ತೆ ಕೊನೇ ನಿಲ್ದಾಣ ಆಗಿರುವುದರಿಂದ ಆ ಪ್ಲಾಟ್‌ಫಾರ್ಮ್‌ನಲ್ಲಿ ಸಮಸ್ಯೆ ಉಂಟಾಗಿಲ್ಲ. ಆದರೆ, ಆರ್.ವಿ. ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಕಡೆಗೆ ಇರುವ ಪ್ಲಾಟ್‌ಫಾರ್ಮ್‌ನಲ್ಲಿ ಸಮಸ್ಯೆ ಎದುರಾಗಿದೆ.
‘ಹಳದಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾಗಿ ನಮಗೆ ಬಹಳ ಅನುಕೂಲವಾಗಿದೆ. ಹಿಂದೆ ಮೆಜೆಸ್ಟಿಕ್‌ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗಲು ಮೆಜೆಸ್ಟಿಕ್‌ನಿಂದಲೇ ಬಸ್ ಹತ್ತಬೇಕಿತ್ತು. ಇಲ್ಲವೇ ಮೆಟ್ರೊ ಹಸಿರು ಮಾರ್ಗದಲ್ಲಿ ಬಂದು ಬನಶಂಕರಿಯಲ್ಲಿ ಇಳಿದು, ಅಲ್ಲಿಂದ ಬಸ್ ಹತ್ತಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗಬೇಕಿತ್ತು. ಹೇಗೆ ಹೋದರೂ ಒಂದೂವರೆ ಗಂಟೆ ಬೇಕಿತ್ತು. ವಾಹನ ದಟ್ಟಣೆ ಹೆಚ್ಚಿದ್ದರೆ ಇನ್ನೂ ಅಧಿಕ ಸಮಯ ಹಿಡಿಯುತ್ತಿತ್ತು. ಹಸಿರು ಮಾರ್ಗದಲ್ಲಿ ಮೆಜೆಸ್ಟಿಕ್‌ನಿಂದ ಆರ್.ವಿ. ರಸ್ತೆಗೆ ತಲುಪಲು 15–16 ನಿಮಿಷ ಸಾಕಾಗುತ್ತದೆ. ಹಾಗಾಗಿ ವಾಹನ ದಟ್ಟಣೆಯಲ್ಲಿ ಸಿಲುಕುವ ಜಂಜಾಟ ತಪ್ಪಿದೆ. ಆದರೆ, ಈಗ ಆರ್.ವಿ. ರಸ್ತೆ ಮೆಟ್ರೊ ಸ್ಟೇಷನ್‌ನಲ್ಲಿ ನಿಲ್ಲಲು ಜಾಗ ಇಲ್ಲದಂತಾಗಿರುವುದು ಹೊಸ ಸಮಸ್ಯೆ’ ಎಂದು ಎಲೆಕ್ಟ್ರಾನಿಕ್ ಸಿಟಿಯ ಐಟಿ ಉದ್ಯೋಗಿ ರೋಶನ್ ಎನ್. ಅನುಭವ ಹಂಚಿಕೊಂಡರು.
‘ನಾನು ಆರ್.ವಿ. ರಸ್ತೆಗೆ ತಲುಪಿದಾಗ ಬೊಮ್ಮಸಂದ್ರ ಕಡೆಗೆ ಆಗಷ್ಟೇ ಮೆಟ್ರೊ ಹೋಗಿ ಎರಡು ನಿಮಿಷ ಆಗಿತ್ತು. ಮುಂದಿನ ಮೆಟ್ರೊ 23 ನಿಮಿಷ ಎಂದು ಸಮಯ ಫಲಕ ತೋರಿಸುತ್ತಿತ್ತು. ನಿಲ್ದಾಣದಲ್ಲಿ ಆಗ ಅಷ್ಟೇನು ಜನರು ಇರಲಿಲ್ಲ. 10 ನಿಮಿಷ ಕಳೆಯುವ ಹೊತ್ತಿಗೆ ಜನರು ತುಂಬಿದ್ದರು. ಮೆಟ್ರೊ ಬರಲು ಇನ್ನೂ ಮೂರು ನಿಮಿಷ ಇದೆ ಎನ್ನುವ ಹೊತ್ತಿಗೆ ನಿಲ್ಲಲು ಜಾಗ ಇಲ್ಲದಂತಾಗಿತ್ತು. ಹಿಂದಿನಿಂದ ಕೆಲವರು ಜಾಗವಿಲ್ಲದೇ ದಬ್ಬುತ್ತಿದ್ದರು. ಭದ್ರತಾ ಸಿಬ್ಬಂದಿ ನಿಯಂತ್ರಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದರು’ ಎಂದು ಐಟಿ ಉದ್ಯೋಗಿ ಪ್ರಜ್ವಲ್ ಕುಮಾರ್ ಅಪಾಯದ ಸನ್ನಿವೇಶವನ್ನು ಬಿಚ್ಚಿಟ್ಟರು.
‘ಇಂಟರ್‌ಚೇಂಜ್ ನಿಲ್ದಾಣ ಎಂದ ಮೇಲೆ ಪ್ರಯಾಣಿಕರ ಸಂಖ್ಯೆ ಹೆಚ್ಚೇ ಇರುತ್ತದೆ. ಅಲ್ಲದೇ ಹಳದಿ ಮಾರ್ಗ ಐಟಿ ಹಬ್ ಕಡೆಗೆ ಸಂಪರ್ಕಿಸುವುದರಿಂದ ಉದ್ಯೋಗಿಗಳು ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಹೀಗಿರುವಾಗ ಪ್ರಯಾಣಿಕರು ನಿಲ್ಲಲು ಎಷ್ಟು ಜಾಗ ಬೇಕು ಎಂದು ಮೊದಲೇ ಅಂದಾಜಿಸಿ, ಅದಕ್ಕೆ ಸರಿಯಾಗಿ ನಿಲ್ದಾಣ ದೊಡ್ಡದಾಗಿ ನಿರ್ಮಿಸಬೇಕಿತ್ತು. ಈಗ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ’ ಎಂದು ಎಲೆಕ್ಟ್ರಾನಿಕ್ ಸಿಟಿಯ ಮತ್ತೊಬ್ಬ ಐಟಿ ಉದ್ಯೋಗಿ ಸೃಜನ್ ಪಿ. ತಿಳಿಸಿದರು.
ಇಂಟರ್‌ಚೇಂಜ್ ನಿಲ್ದಾಣವನ್ನು ಉಳಿದ ಸಾಮಾನ್ಯ ನಿಲ್ದಾಣದಂತೆ ನಿರ್ಮಿಸಿರುವುದೇ ಸಮಸ್ಯೆಗೆ ಕಾರಣ ಎಂಬುದು ಬಹುತೇಕ ಪ್ರಯಾಣಿಕರ ಅಭಿಪ್ರಾಯವಾಗಿದೆ.
ಆರ್.ವಿ. ರಸ್ತೆ ಮೆಟ್ರೊ ನಿಲ್ದಾಣಕ್ಕೆ ಹಳದಿ ಮಾರ್ಗದಲ್ಲಿ ಒಂದು ರೈಲು ಹೋಗಿ ಇನ್ನೊಂದು ರೈಲು ಬರುವ ಹೊತ್ತಿಗೆ (25 ನಿಮಿಷ) ಹಸಿರು ಮಾರ್ಗದಲ್ಲಿ ಮೆಜೆಸ್ಟಿಕ್ ಕಡೆಯಿಂದ ಕನಿಷ್ಠ ನಾಲ್ಕು, ರೇಷ್ಮೆ ಸಂಸ್ಥೆ ಕಡೆಯಿಂದ ನಾಲ್ಕು ಮೆಟ್ರೊ ರೈಲು ಬಂದು ಹೋಗಿರುತ್ತವೆ. ಬೊಮ್ಮಸಂದ್ರ ಕಡೆಗೆ ಸಾಗುವವರೆಲ್ಲ ಹಸಿರು ಮಾರ್ಗದ ಮೆಟ್ರೊದಿಂದ ಇಳಿದು ಹಳದಿ ಮಾರ್ಗದ ಪ್ಲಾಟ್‌ಫಾರ್ಮ್‌ಗೆ ಬರುತ್ತಾರೆ. ಇದರಿಂದಾಗಿ ದಟ್ಟಣೆ ಅವಧಿಯಲ್ಲಿ ಸಮಸ್ಯೆ ಆಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಪ್ಲಾಟ್‌ಫಾರ್ಮ್ ಚಿಕ್ಕದಾಗಿಲ್ಲ. ಹಳದಿ ಮಾರ್ಗದಲ್ಲಿ ಮೆಟ್ರೊ ರೈಲುಗಳ ಸಂಖ್ಯೆ ಕಡಿಮೆ ಇರುವುದು ಸಮಸ್ಯೆಗೆ ಕಾರಣ. ರೈಲುಗಳ ಸಂಖ್ಯೆ ಹೆಚ್ಚಾದಾಗ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಮುಂದಿನ ತಿಂಗಳು ನಾಲ್ಕನೇ ರೈಲು ಸಂಚಾರ ಆರಂಭಿಸಲಿದೆ. ಮುಂದಿನ ವರ್ಷ ಮಾರ್ಚ್ ಅಂತ್ಯದ ಒಳಗೆ ಎಲ್ಲ ರೈಲುಗಳ ಪೂರೈಕೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.