ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ನರಸೀಪುರ ಗ್ರಾಮದ ಪಶುವೈದ್ಯ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಹೈನುಗಾರರಿಗೆ ತೊಂದರೆಯಾಗಿದೆ.
ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಶು ವೈದ್ಯರು ಒಂದು ತಿಂಗಳ ಹಿಂದೆ ವರ್ಗಾವಣೆಯಾಗಿ ಹೋಗಿದ್ದಾರೆ. ಅವರ ಬದಲಿಗೆ ಯಾರನ್ನೂ ನಿಯೋಜಿಸಿಲ್ಲ. ಇದರಿಂದ ದನಕರುಗಳಿಗೆ ಕಾಯಿಲೆ ಬಂದರೆ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.
ನರಸೀಪುರ ಪಶುವೈದ್ಯಕೀಯ ಕೇಂದ್ರ ವ್ಯಾಪ್ತಿಗೆ 29 ಗ್ರಾಮಗಳು, 10 ಹಾಲು ಉತ್ಪಾದಕರ ಸಹಕಾರ ಸಂಘಗಳು ಬರುತ್ತವೆ. ಈ ಭಾಗದ ರೈತರು ಕೃಷಿ, ತೋಟಗಾರಿಕೆ ಜೊತೆಗೆ ಹೈನುಗಾರಿಕೆ ನೆಚ್ಚಿಕೊಂಡಿದ್ದಾರೆ. ಇದಕ್ಕಾಗಿ ಹೆಚ್ಚು ಹೆಚ್ಚು ರಾಸುಗಳನ್ನು ಸಾಕಿದ್ದಾರೆ. ದಿನನಿತ್ಯ ಬಮೂಲ್ ಸಾವಿರಾರು ಲೀಟರ್ ಹಾಲು ಕಳುಹಿಸುತ್ತಾರೆ. ರಾಸುಗಳು ಅನಾರೋಗ್ಯಕ್ಕೆ ಒಳಗಾದರೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದಾಗಿದೆ ಎನ್ನುತ್ತಾರೆ ರೈತ ರಾಮಯ್ಯ.
ರೈತರು, ದನಗಳ ಜೊತೆಗೆ ಮೇಕೆ, ಕುರಿಗಳನ್ನು ಸಾಕಿದ್ದಾರೆ. ಪಶು ಚಿಕಿತ್ಸಾಲಯದಲ್ಲಿ ವೈದ್ಯರು ಇಲ್ಲದೆ ಅವುಗಳಿಗೂ ಸಮಯಕ್ಕೆ ಚಿಕಿತ್ಸೆ ಸಿಗದಾಗಿದೆ.
ವೈದ್ಯರು ಇಲ್ಲದೆ ಇರುವುದರಿಂದ ರಾಸುಗಳಿಗೆ ಅಕಾಲಿಕ ಕಾಯಿಲೆ ಹಾಗೂ ಇತರ ತೊಂದರೆ ಉಂಟಾದರೆ ಬೇರೆ ಕಡೆ ಕೆಲಸ ಮಾಡುವ ವೈದ್ಯರನ್ನು ಅವಲಂಬಿಸಬೇಕಾದ ಅಥವಾ ಮೆಡಿಕಲ್ ಸ್ಟೋರ್‌ಗಳಲ್ಲಿ ಔಷಧಿ ತಂದು ಹಾಕಬೇಕಾದ ಪರಿಸ್ಥಿತಿಯಿದೆ. ದೂರದಿಂದ ವೈದ್ಯರು ಬರುವ ವೇಳೆಗೆ ದನ ಕರು ಮೇಕೆ ಸತ್ತರೆ ಏನು ಮಾಡಬೇಕು ಎಂದು ಬೇಸರದಿಂದ ಪ್ರಶ್ನಿಸುತ್ತಾರೆ ರೈತ ಆನಂದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.