ADVERTISEMENT

ಪುನೀತ್ ಜನ್ಮದಿನ ಸ್ಫೂರ್ತಿಯ ದಿನ: ಬಸವರಾಜ ಬೊಮ್ಮಾಯಿ

ಆರ್ಯ ಈಡಿಗರ ಸಮುದಾಯ ಭವನಕ್ಕೆ ₹ 5 ಕೋಟಿ ಅನುದಾನ– ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 7:24 IST
Last Updated 16 ಸೆಪ್ಟೆಂಬರ್ 2022, 7:24 IST
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರು ನಾರಾಯಣ ಗುರುಗಳ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಎಂ. ತಿಮ್ಮೇಗೌಡ, ಎಚ್‌. ಹಾಲಪ್ಪ, ವಿ. ಸುನೀಲ್‌ ಕುಮಾರ್ ಹಾಗೂ ವಿಖ್ಯಾತಾನಂದ ಸ್ವಾಮೀಜಿ ಇದ್ದಾರೆ –ಪ್ರಜಾವಾಣಿ ಚಿತ್ರ
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರು ನಾರಾಯಣ ಗುರುಗಳ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಎಂ. ತಿಮ್ಮೇಗೌಡ, ಎಚ್‌. ಹಾಲಪ್ಪ, ವಿ. ಸುನೀಲ್‌ ಕುಮಾರ್ ಹಾಗೂ ವಿಖ್ಯಾತಾನಂದ ಸ್ವಾಮೀಜಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿಯ ದಿನವನ್ನಾಗಿ ಸರ್ಕಾರದ ವತಿಯಿಂದರಾಜ್ಯದಾದ್ಯಂತ ಆಚರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ನಗರದಲ್ಲಿ ಗುರುವಾರ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಉದ್ಘಾಟಿಸಿದರು. ಆರ್ಯ ಈಡಿಗ ಸಮುದಾಯದ ಮುಖಂಡರು ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ ಅವರ ಮನವಿಗೆ ಸ್ಪಂದಿಸಿದ ಅವರು,‘ಆರ್ಯ ಈಡಿಗ ಸಮಾಜದ ದೊಡ್ಡ ಶಕ್ತಿ ಡಾ.ರಾಜ್‌ ಕುಮಾರ್. ಅವರ ಪುತ್ರ ಪುನೀತ್ ಅತ್ಯಂತ ಆಪ್ತರಾಗಿದ್ದರು. ಅವರಿಗೆ ನ.1ರಂದು ‘ಕರ್ನಾಟಕ ರತ್ನ’ ನೀಡಲಾಗುತ್ತದೆ. ಜನ್ಮದಿನವಾದ ಮಾರ್ಚ್ 17ರಂದುಸ್ಫೂರ್ತಿಯ ದಿನವನ್ನಾಗಿ ಆಚರಿಸಲಾಗುವುದು’ ಎಂದರು.

‘ಆರ್ಯ ಈಡಿಗ ಕೇಂದ್ರ ಸಂಘದ ಸಮೀಪದಲ್ಲಿರುವ ಮಂತ್ರಿ ಸ್ಕ್ವೇರ್ ಮೆಟ್ರೊ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಲು ಕ್ರಮವಹಿಸಲಾಗುವುದು. ಬೆಂಗಳೂರಿನ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಕಂತುಗಳಲ್ಲಿ ₹ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ ಕೇಂದ್ರಗಳ ನಿರ್ಮಾಣಕ್ಕೆ ಸೋಲೂರಿನಲ್ಲಿ ನಾರಾಯಣಗುರು ಮಠಕ್ಕೆ ಹೊಂದಿಕೊಂಡಿರುವ ಗೋಮಾಳ ಜಾಗದಲ್ಲಿ 10 ಎಕರೆ ಮಂಜೂರಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಮುದಾಯಕ್ಕೆ ವಿಶೇಷ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಶಾಲೆಗಳಿಗೆ ಹೆಸರಿಡಿ: ಸೋಲೂರಿನ ಆರ್ಯ ಈಡಿಗ ಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ‘ನಾರಾಯಣ ಗುರುಗಳು ಸಮಾಜದ ಉನ್ನತಿಗೆ ಶ್ರಮಿಸಿದರು. ಅವರು ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಪ್ರತಿಭಟಿಸುವ ಬದಲು, ಮೌನ ವ್ರತದ ಮೂಲಕವೇ ಬದಲಾವಣೆ ಮಾಡಿದರು. ಎಲ್ಲ ಜಿಲ್ಲೆಗಳಲ್ಲಿ ಅವರ ಹೆಸರಿನಲ್ಲಿ ಶಾಲೆಗಳನ್ನು ಸ್ಥಾಪಿಸಬೇಕು. ನಮ್ಮ ಮಠಕ್ಕೆ ಕನಿಷ್ಠ ಒಂದು ಶಾಲೆಯ ನಿರ್ವಹಣೆಯ ಜವಾಬ್ದಾರಿ ನೀಡಿದರೂ ಮಾದರಿ ಶಾಲೆಯನ್ನಾಗಿ ರೂಪಿಸುತ್ತೇವೆ’ ಎಂದು ಹೇಳಿದರು.

ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ, ‘ನಾರಾಯಣ ಗುರುಗಳು ಬಿಟ್ಟುಹೋದ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಆರ್ಯ ಈಡಿಗ ಸಮುದಾಯದ 26 ಪಂಗಡಗಳೂ ಒಂದಾಗಿ ಸಾಗಬೇಕು’ ಎಂದು ತಿಳಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.