ಲೈಂಗಿಕ ದೌರ್ಜನ್ಯ –ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಅತ್ಯಾಚಾರ ಮತ್ತು ಇತರ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಪಟ್ಟಂತೆ ಕಾನೂನುಗಳನ್ನು ಲಿಂಗತ್ವ ತಟಸ್ಥ (ಜೆಂಡರ್ ನ್ಯೂಟ್ರಲ್) ಮಾಡಬೇಕೆಂದು ರಾಜ್ಯ ಸರ್ಕಾರ ಮುಂದಿಟ್ಟಿರುವ ಸಲಹೆಯನ್ನು ಹಿಂಪಡೆಯಬೇಕು ಎಂದು ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ (ಎನ್‌ಎಫ್‌ಐಡಬ್ಲ್ಯು) ರಾಜ್ಯ ಮಂಡಳಿ ಆಗ್ರಹಿಸಿದೆ.
ಎನ್‌ಎಫ್‌ಐಡಬ್ಲ್ಯು ನೇತೃತ್ವದಲ್ಲಿ ಭಾನುವಾರ ನಗರದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಮಾಲೋಚನಾ ಸಭೆ ನಡೆಯಿತು.
‘ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನುಗಳಲ್ಲಿ ಲಿಂಗತ್ವ ತಟಸ್ಥ ಎನ್ನುವುದು ಸ್ತ್ರೀದ್ವೇಷ ಮತ್ತು ಪುರುಷಪ್ರಧಾನ ಮನಃಸ್ಥಿತಿಯ ಉತ್ಪನ್ನವಾಗಿದೆ. ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರ ಇದು. ಹೊಸ ಕ್ರಿಮಿನಲ್ ಕಾನೂನಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಪ್ರತ್ಯೇಕ ಅಧ್ಯಾಯ ರೂಪಿಸಬೇಕು’ ಎಂದು ಹಿರಿಯ ವಕೀಲ ಬಿ.ಟಿ. ವೆಂಕಟೇಶ್ ಒತ್ತಾಯಿಸಿದರು.
‘ಅತ್ಯಾಚಾರ ವಿರೋಧಿ ಕಾನೂನುಗಳನ್ನು ಸತ್ವಹೀನಗೊಳಿಸಬಾರದು. ನಮ್ಮ ಸಮಾಜವು ಕಾನೂನಿನ ಬದಲಾವಣೆಗಳಿಗೆ ತೆರೆದುಕೊಂಡಿಲ್ಲ’ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಜೀಜಾ ಹರಿಸಿಂಗ್ ಬೇಸರ ವ್ಯಕ್ತಪಡಿಸಿದರು.
‘ಶಾಸನಗಳ ಕುರಿತು ಚರ್ಚಿಸಲು ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯವೇ ಇಲ್ಲ’ ಎಂದು ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟದ ಅಧ್ಯಕ್ಷೆ ಅಕ್ಕೈ ಪದ್ಮಶಾಲಿ ದೂರಿದರು.
‘ಲಿಂಗತ್ವ ತಟಸ್ಥ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಅಖಿಲಾ ತಿಳಿಸಿದರು.
‘ಈಗ ಇರುವ ಕಾನೂನುಗಳನ್ನು ಬಲಿಷ್ಠಗೊಳಿಸುವುದನ್ನು ಬಿಟ್ಟು, ಅನಗತ್ಯ ವಿಚಾರಗಳನ್ನು ತರುವುದು ಸರಿಯಲ್ಲ’ ಎಂದು ದಲಿತ ಚಳವಳಿಯ ಪ್ರಮುಖರಾದ ಇಂದಿರಾ ಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳೆಯರಿಗೆ ದೂರು ದಾಖಲಿಸಲು ಸುರಕ್ಷಿತ ವಾತಾವರಣ ಇರಬೇಕು. ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರ ಕೇಂದ್ರಿತ ಕಾನೂನು ರಚನೆ ಮಾಡಬೇಕು. ಮಾಧ್ಯಮಗಳೇ ಅಪರಾಧಿಗಳ ಸೃಷ್ಟಿಗೆ ಕಾರಣವಾಗುತ್ತಿರುವುದನ್ನು ನಿಯಂತ್ರಿಸಬೇಕು. ವೈವಾಹಿಕ ಅತ್ಯಾಚಾರ ಮತ್ತು ಮರ್ಯಾದಗೇಡು ಹತ್ಯೆಯನ್ನು ಕಾನೂನಿನಡಿ ಸೇರಿಸಬೇಕು ಎಂದು ಎಐಎಂಎಸ್ಎಸ್ ಕಾರ್ಯಕರ್ತೆ ಹೇಮಾವತಿ, ಗಾಟು ಸಂಘಟನೆಯ ಪ್ರತಿಭಾ, ಗಮನ ಸಂಸ್ಥೆಯ ಮಧುಭೂಷಣ್, ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ, ಡಿಎಸ್‌ಎಸ್‌ನ ನಿರ್ಮಲಾ ಆಗ್ರಹಿಸಿದರು.
ಎನ್‌ಎಫ್‌ಐಡಬ್ಲ್ಯು ರಾಜ್ಯ ಘಟಕದ ಅಧ್ಯಕ್ಷೆ ಜ್ಯೋತಿ ಎ. ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ರೇಣುಕಾ ಕೆ., ದಿವ್ಯಾ ಎಸ್. ಬಿರಾದಾರ್, ಉಮಾ, ರಾಜಲಕ್ಷ್ಮಿ, ವಿಜಯಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.