ಕೈಮಗ್ಗ ನೇಕಾರರಾದ ತಿಪ್ಪೇಸ್ವಾಮಿ, ಹನುಮಂತಮ್ಮ ಬಾಣದ, ರಮೇಶ್, ಆರ್.ಮಂಜುನಾಥ್ ಮತ್ತು ತುಕಾರಾಮ ಹನುಮಂತಪ್ಪ ವದ್ದಿ ಅವರಿಗೆ ‘ರಾಜ್ಯ ಕೈಮಗ್ಗ ನೇಕಾರ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಬಟ್ಟೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಭಾರತದ ಜವಳಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಪೂರೈಕೆಗೆ ನಮ್ಮ ನೇಕಾರರು ಸಿದ್ಧವಾಗಬೇಕಿದೆ’ ಎಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕಾವೇರಿ ಹ್ಯಾಂಡ್ ಲೂಮ್ಸ್, ನೇಕಾರರ ಸೇವಾ ಕೇಂದ್ರ ಹಾಗೂ ಎಫ್‌ಐಸಿಸಿಐ ಎಫ್ಎಲ್‌ಒ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಮತ್ತು ಕೈಮಗ್ಗ ನೇಕಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ನೇಕಾರಿಕೆಗೆ ಹಲವು ಪ್ರೋತ್ಸಾಹಗಳನ್ನು ನೀಡುತ್ತಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಪಿಎಂ–ಮಿತ್ರ ಪಾರ್ಕ್ ಸ್ಥಾಪಿಸಲು ಕಲಬುರ್ಗಿಯಲ್ಲಿ 1,000 ಎಕರೆಯಷ್ಟು ಜಮೀನು ಗುರುತಿಸಲಾಗಿದೆ. ಈ ಪಾರ್ಕ್ ಸ್ಥಾಪನೆಯಾದರೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯ ಸರ್ಕಾರದಿಂದ 20 ರಿಂದ 25 ಮಿನಿ ಜವಳಿ ಪಾರ್ಕ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದರು.
‘ಸರ್ಕಾರದ ಎಲ್ಲಾ ಇಲಾಖೆಗಳು ಜವಳಿ ನಿಗಮದ ಮೂಲಕವೇ ಬಟ್ಟೆ ಖರೀದಿಸಿದರೆ ನಿಗಮಗಳಿಗೂ ಅನುಕೂಲವಾಗುತ್ತದೆ. ಇದರಿಂದ ನೇಕಾರರಿಗೆ ವರ್ಷವಿಡೀ ಕೆಲಸ ದೊರೆಯುತ್ತದೆ. ಈ ಕುರಿತು ಹಿಂದೆ ಹೊರಡಿಸಿದ್ದ ಆದೇಶ ಪಾಲನೆಗೆ ಕ್ರಮ ಕೈಗೊಳ್ಳಬೇಕು’ ಎಂದು ವೇದಿಕೆಯಲ್ಲಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಕೋರಿದರು.
ಕೈಮಗ್ಗ ಉತ್ಪನ್ನಗಳ ಮಾರಾಟದ ಮೇಲೆ ಸದ್ಯ ಶೇ 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ರಿಯಾಯಿತಿಯನ್ನು ಶೇ 30 ರಿಂದ ಶೇ 40 ರಷ್ಟಕ್ಕೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಕರ್ನಾಟಕ ರಾಜ್ಯ ಸಹಕಾರ ಕೈ ಮಗ್ಗ ನೇಕಾರರ ಮಹಾಮಂಡಳ (ಕಾವೇರಿ ಹ್ಯಾಂಡ್ ಲೂಮ್ಸ್) ಅಧ್ಯಕ್ಷ ಬಿ.ಜೆ. ಗಣೇಶ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.