ADVERTISEMENT

ರಾಷ್ಟ್ರೀಯ ತೋಟಗಾರಿಕಾ ಮೇಳ: ಕಸದಿಂದ ಬಯೊಮಿಥೇನ್‌ ಅನಿಲ ಉತ್ಪತ್ತಿ

ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಸಾರ್ವಜನಿಕರ ಗಮನ ಸೆಳೆದ ಜೈವಿಕ ಅನಿಲ ಘಟಕ

ಖಲೀಲಅಹ್ಮದ ಶೇಖ
Published 27 ಫೆಬ್ರುವರಿ 2025, 23:52 IST
Last Updated 27 ಫೆಬ್ರುವರಿ 2025, 23:52 IST
<div class="paragraphs"><p>ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಪ್ರದರ್ಶಿಸಿರುವ ಜೈವಿಕ ಅನಿಲ ಘಟಕ </p></div>

ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಪ್ರದರ್ಶಿಸಿರುವ ಜೈವಿಕ ಅನಿಲ ಘಟಕ

   

ಪ್ರಜಾವಾಣಿ ಚಿತ್ರಗಳು: ಕೃಷ್ಣಕುಮಾರ್ ಪಿ.ಎಸ್.

ಬೆಂಗಳೂರು: ನಗರ ಪ್ರದೇಶದ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸ ವಿಲೇವಾರಿಯೇ ದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರ ನೀಡಲು ‘ಹರಿತವಾಣಿ ವಜ್ರ’ ಎಂಬ ನವೋದ್ಯಮವು ಜೈವಿಕ ಅನಿಲ ಘಟಕವೊಂದನ್ನು ಅಭಿವೃದ್ಧಿಪಡಿಸಿದೆ. ಪ್ರತಿದಿನ ಇದರಲ್ಲಿ ಐದು ಕೆ.ಜಿ ಹಸಿ ತ್ಯಾಜ್ಯ ಹಾಕಿದರೆ, 1 ಸಾವಿರ ಲೀಟರ್‌ ಬಯೊಮಿಥೇನ್‌ ಅನಿಲ ಉತ್ಪತ್ತಿ ಆಗುತ್ತದೆ.

ADVERTISEMENT

ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್‌ಆರ್‌) ಗುರುವಾರ ಆರಂಭವಾದ ‘ರಾಷ್ಟ್ರೀಯ ತೋಟಗಾರಿಕಾ ಮೇಳ’ದಲ್ಲಿ ಈ ಜೈವಿಕ ಅನಿಲ ಘಟಕವನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

‘ಮನೆಯಲ್ಲಿನ ಹಸಿ ಕಸವನ್ನು ಕರಗಿಸಿ ಜೈವಿಕ ಅನಿಲ ಉತ್ಪಾದಿಸಲು ಈ ಘಟಕ ಸಹಾಯಕವಾಗಿದೆ. ಆಮ್ಲಜನಕರಹಿತ ಜೀರ್ಣಕ್ರಿಯೆಯ ಮಾದರಿಯಲ್ಲಿ ಅನಿಲ ಉತ್ಪಾದನೆ ಆಗುತ್ತದೆ. ಡ್ರಮ್ ಮಾದರಿಯಲ್ಲಿರುವ ಈ ಘಟಕಕ್ಕೆ ಬಲೂನ್‌ವೊಂದನ್ನು ಅಳವಡಿಸಿ, ಅದರಲ್ಲಿಯೇ ಅನಿಲ ಶೇಖರಿಸಲಾಗುತ್ತದೆ. ಬಲೂನ್‌ನಲ್ಲಿರುವ ಅನಿಲವನ್ನು ಕೊಳವೆಗಳ ಮೂಲಕ ಗ್ಯಾಸ್‌ ಸ್ಟೌಗೆ ಜೋಡಿಸಲಾಗುತ್ತದೆ’ ಎಂದು ಸಂಸ್ಥೆಯ ಸಂಸ್ಥಾಪಕ ಕಿರಣ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜೈವಿಕ ಅನಿಲ ಘಟಕ ಅಳವಡಿಸಿಕೊಂಡು ಐದು ಕೆ.ಜಿ ಹಸಿ ಕಸ ಹಾಕಿದ ನಾಲ್ಕು ವಾರದ ನಂತರ ಅದು ಅನಿಲವಾಗಿ ಪರಿವರ್ತನೆಯಾಗುತ್ತದೆ. ನಿತ್ಯ ನಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಈ ಘಟಕಕ್ಕೆ ಹಾಕುತ್ತಾ ಹೋಗಬೇಕು. ಈ ಘಟಕಕ್ಕೆ ವಿದ್ಯುತ್‌ ಬಳಕೆಯ ಅಗತ್ಯವಿಲ್ಲ. ಘಟಕದ ಮೇಲೆ ಬಿಸಿಲು ಬಿದ್ದರೆ ಅಷ್ಟೇ ಸಾಕು. ಅನಿಲವಾಗಿ ಪರಿವರ್ತನೆಯಾಗುವ ಸಂದರ್ಭದಲ್ಲಿ ಉತ್ಪತ್ತಿಯಾಗುವ ದ್ರವವನ್ನು ಗಿಡಗಳಿಗೆ ಗೊಬ್ಬರವಾಗಿ ಬಳಸಬಹುದು. ಈ ಘಟಕ ಗರಿಷ್ಠ 35 ಕೆ.ಜಿವರೆಗೂ ಹಸಿ ಕಸ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ’ ಎಂದು ಮಾಹಿತಿ ನೀಡಿದರು.

‘ಹಣ್ಣು–ತರಕಾರಿಗಳ ಸಿಪ್ಪೆ, ಮೊಟ್ಟೆಯ ಸಿಪ್ಪೆ, ಹಸಿ ಮಾಂಸ, ಮೀನಿನ ಮುಳ್ಳುಗಳು, ಬೇಯಿಸಿರುವ ಮೂಳೆ, ಉಳಿದ ಅನ್ನ, ಸಾಂಬಾರು, ಕಾಫಿ, ಚಹಾ ಪುಡಿಯನ್ನು ಈ ಘಟಕದಲ್ಲಿ ಹಾಕಬಹುದು. ಒಣಗಿರುವ ಎಲೆ, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಹಾಗೂ ಕಾಗದ ಹಾಕಬಾರದು. ಹಸುಗಳಿರುವ ಮನೆಗಳಲ್ಲಿ 10 ಕೆ.ಜಿ. ಸೆಗಣಿ ಹಾಕಿದರೆ ನಿತ್ಯವೂ ನಮಗೆ 1,500 ಲೀಟರ್‌ ಅನಿಲ ಉತ್ಪತ್ತಿ ಆಗುತ್ತದೆ’ ಎಂದರು.

‘ಒಂದು ಘಟಕ ಸ್ಥಾಪಿಸಲು ₹30 ಸಾವಿರ ಖರ್ಚಾಗಲಿದೆ. ಇದಕ್ಕೆ 20 ವರ್ಷದ ಖಾತರಿ ನೀಡುತ್ತೇವೆ. ಜೈವಿಕ ಅನಿಲ ಬಲೂನ್, ಸ್ಟೌ ಉಚಿತವಾಗಿ ನೀಡಲಾಗುತ್ತದೆ. ಈ ಘಟಕದ ಪೇಟೆಂಟ್‌ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ಅಲ್ಟಿಮೇಟ್‌ ರೋಬೊ

ಗಮನ ಸೆಳೆದ ಅಲ್ಟಿಮೇಟ್‌ ರೋಬೊ

ಒಂದೇ ರೋಬೊ ಬಳಸಿ ತೋಟಗಾರಿಕೆ ಬೆಳೆಗಳ ಪ್ರದೇಶದಲ್ಲಿ ಕಸ ತೆಗೆಯುವ ಔಷಧ ಸಿಂಪಡಿಸುವ ಉಳುಮೆ ಮಾಡುವ ಮತ್ತು ಸರಕು ಸಾಗಿಸುವ ಸಾಧನಗಳನ್ನು ರಿಮೋಟ್‌ ಮೂಲಕ ನಿಯಂತ್ರಿಸಬಹುದಾದ ‘ಅಲ್ಟಿಮೇಟ್‌ ರೋಬೊ’ ಹೆಸರಿನ ಸಾಧನ ಪ್ರದರ್ಶನದಲ್ಲಿ ರೈತರ ಗಮನ ಸೆಳೆಯಿತು.

ಎಕ್ಸ್ ಮಷಿನ್‌ ಕಂಪನಿ ಮೇಳದಲ್ಲಿ ತನ್ನ ಈ ಉತ್ಪನ್ನವನ್ನು ಪ್ರದರ್ಶನಕ್ಕೆ ಇರಿಸಿದೆ.

‘ಈ ರೋಬೊ 1.77 ಅಡಿ ಅಗಲ 2.88 ಅಡಿ ಎತ್ತರ ಇದೆ. ಎಲ್ಲ ರೀತಿಯ ತೋಟಗಾರಿಕೆ ಬೆಳೆಗಳ ನಿರ್ವಹಣೆಗೆ ಸಹಕಾರಿ ಆಗಿದೆ. ರಿಮೋಟ್‌ ಮೂಲಕ ನಿಯಂತ್ರಿಸಬಹುದು. ಇದರ ಬ್ಯಾಟರಿಯನ್ನು ಒ‌ಮ್ಮೆ ಚಾರ್ಜ್‌ ಮಾಡಿದರೆ ನಾಲ್ಕು ಗಂಟೆಯವರೆಗೆ ಕೆಲಸ ಮಾಡುತ್ತದೆ. ಒಂದು ಗಂಟೆಯಲ್ಲಿ ಒಂದು ಎಕರೆ ಜಮೀನನ್ನು ಉಳುಮೆ ಮಾಡಬಹುದು ಅಥವಾ ಔಷಧಿ ಗೊಬ್ಬರ ಸಿಂಪಡಿಸಬಹುದು’ ಎಂದು ಕಂಪನಿಯ ಪ್ರತಿನಿಧಿ ಜಿತೇಂದ್ರ ಮಾಹಿತಿ ನೀಡಿದರು.

‘ಈ ರೋಬೊಗೆ ಔಷಧಿ ಸಿಂಪಡಿಸುವ ಹುಲ್ಲು ಕತ್ತರಿಸುವ ಯಂತ್ರ ರೋಟೊವೇಟರ್‌ ಟಿಲ್ಲರ್ ನೀಡಲಾಗುತ್ತದೆ. 300 ಮೀಟರ್‌ ವ್ಯಾಪ್ತಿಯೊಳಗೆ ಇದನ್ನು ರಿಮೋಟ್‌ ಮೂಲಕ ನಿಯಂತ್ರಿಸಬಹುದು. ಈ ಎಲ್ಲ ಯಂತ್ರಗಳ ಒಟ್ಟು ಬೆಲೆ ₹3.5 ಲಕ್ಷ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.