ADVERTISEMENT

ಮಾಧವಿ ಸಿಂಗ್‌ಗೆ 11 ಚಿನ್ನದ ಪದಕ

ನ್ಯಾಷನಲ್‌ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:38 IST
Last Updated 29 ಸೆಪ್ಟೆಂಬರ್ 2019, 19:38 IST
ಘಟಿಕೋತ್ಸವದಲ್ಲಿ ಚಿನ್ನದ ಪದಕ ವಿಜೇತರು ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ
ಘಟಿಕೋತ್ಸವದಲ್ಲಿ ಚಿನ್ನದ ಪದಕ ವಿಜೇತರು ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಾನೂನು ವಿಷಯದ ಮೇಲೆ ರಾಜ್ಯದ ವಿದ್ಯಾರ್ಥಿಗಳಿಗೆ ಆಸಕ್ತಿ ಕಡಿಮೆಯಾಗಿದೆ. ‌ಹೊರ ರಾಜ್ಯದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಂತೆ ಕೋರ್ಸ್‌ನ ಪ್ರವೇಶ ಪರೀಕ್ಷೆಗಾಗಿ ತಯಾರಿ ನಡೆಸುತ್ತಾರೆ. ಇದರ ಫಲವಾಗಿ ಉತ್ತಮ ರ‍್ಯಾಂಕ್‌ ಪಡೆದು ಮೇಲುಗೈ ಸಾಧಿಸಿದ್ದಾರೆ’...

ಇದು ನ್ಯಾಷನಲ್‌ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯ ಬಿ.ಎ. (ಎಲ್‌.ಎಲ್‌.ಬಿ) ವಿಭಾಗದಲ್ಲಿ ಈ ಬಾರಿ ಮೂರನೇ ರ‍್ಯಾಂಕ್‌ ಪಡೆದ ಬೆಂಗಳೂರಿನ ಪವನ್‌ ಶ್ರೀನಿವಾಸ್‌ ಅವರ ಮನದಾಳದ ಮಾತುಗಳು.

ನ್ಯಾಷನಲ್‌ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯಲ್ಲಿ ಭಾನುವಾರ ನಡೆದ 27ನೇ ಘಟಿಕೋತ್ಸವದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಸ್ವೀಕರಿಸಿ, ತಮ್ಮ ಅನಿಸಿಕೆ ಹಂಚಿಕೊಂಡರು.

ADVERTISEMENT

ಅನ್ಯ ರಾಜ್ಯದವರು ಭವಿಷ್ಯದ ಉದ್ದೇಶದಿಂದ ಕಾನೂನು ವಿಷಯಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ, ರಾಜ್ಯದವರು ಅವರಿಗೆ ಸರಿಸಮನಾಗಿ ತಯಾರಿ ನಡೆಸುವುದಿಲ್ಲ. ನಮ್ಮ ವಿಶ್ವವಿದ್ಯಾಲಯದಲ್ಲಿ ಈ ಬಾರಿ ರಾಜ್ಯದ ಆರು ಮಂದಿ ಮಾತ್ರ ಕಾನೂನು ಪದವಿ ಪಡೆದಿದ್ದಾರೆ’ ಎಂದರು.

‘ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಕಾನೂನು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ನಿರ್ಧರಿಸಿದ್ದೇನೆ. ದೇಶದ ಹಿತದೃಷ್ಟಿಯಿಂದ ಉತ್ತಮ ವಕೀಲರ ಅಗತ್ಯ ಹೆಚ್ಚಿದೆ. ಅದರಲ್ಲಿ ನಾನೂ ಒಬ್ಬನಾಗುತ್ತೇನೆ’ ಎಂದು ತಿಳಿಸಿದರು.

11 ಪದಕ ಗಳಿಸಿದ ಜಾರ್ಖಂಡ್‌ನ ಮಾಧವಿ ಸಿಂಗ್‌, ಕಾನೂನು ಪದವಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವುದಾಗಿ ತಿಳಿಸಿದರು.‌ ಮುಂಬೈನ ಮೇಘಾ ಹೇಮಂತ್‌ ಮೆಹ್ತಾ ಅವರು ಆರು ಚಿನ್ನದ ಪದಕಗಳೊಂದಿಗೆ ಎರಡನೇ ರ‍್ಯಾಂಕ್‌ ಗಳಿಸಿದ್ದಾರೆ.

ಭಾರತೀಯ ಬಾರ್ ಕೌನ್ಸಿಲ್‍ನ (ಬಿಸಿಐ) ಅಧ್ಯಕ್ಷ ಮನ್ನನ್‌ ಕುಮಾರ್ ಮಿಶ್ರಾ, ‘ಸಮಾಜದಲ್ಲಿ ಎಂದಿಗೂ ತಪ್ಪಿತಸ್ಥರ ಪರ ಪ್ರಕರಣ ತೆಗೆದುಕೊಳ್ಳಬೇಡಿ. ಯಾವಾಗಲೂ ನ್ಯಾಯಕ್ಕಾಗಿ ಹೋರಾಡಿ’ ಎಂದು ತಿಳಿಸಿದರು.

12 ವಿಭಾಗಗಳ 545 ವಿದ್ಯಾರ್ಥಿಗಳಿಗೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಶರದ್‌ ಅರವಿಂದ್‌ ಬೊಬ್ಡೆ ಪದವಿ ಪ್ರದಾನ ಮಾಡಿದರು. ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‍ಮೆಂಟ್‍ನ ಮಾಜಿ ನಿರ್ದೇಶಕ ಪ್ರೊ.ಕೆ.ಆರ್.ಎಸ್.ಮೂರ್ತಿ, ಕುಲಪತಿ ಸುಧೀರ್‌ ಕೃಷ್ಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.