ಬೆಂಗಳೂರು: ರಾಜರಾಜೇಶ್ವರಿ ನಗರ ವಲಯದಲ್ಲಿ ಆರೋಗ್ಯಾಧಿಕಾರಿಯಾಗಿದ್ದಾಗ ತಮ್ಮ ಮಗನ ಒಡೆತನದ ನಕಲಿ ಸಂಸ್ಥೆಗೆ ಸಾಮಗ್ರಿ ವಿತರಣೆ ಹಾಗೂ ವೈದ್ಯರನ್ನು ಒದಗಿಸಲು ಕಾರ್ಯಾದೇಶ ನೀಡಿ ಕರ್ತವ್ಯಲೋಪ ಎಸಗಿರುವ ಡಾ. ಎಸ್.ಕೆ. ಸವಿತಾ ಅವರಿಗೆ ನಗರಾಭಿವೃದ್ಧಿ ಇಲಾಖೆ ನೋಟಿಸ್ ಜಾರಿ ಮಾಡಿದೆ.
‘2022ರ ಜನವರಿ 5ರಿಂದ ಮೇ 23ರವರೆಗೆ ರಾಜರಾಜೇಶ್ವರಿ ನಗರ ವಲಯದಲ್ಲಿ ಆರೋಗ್ಯಾಧಿಕಾರಿಯಾಗಿದ್ದಾಗ ಸವಿತಾ ಅವರು ತಮ್ಮ ಮಗನಾದ ಸಿ. ಸಿದ್ದರಾಜು ಚಿರಾಗ್ ಒಡೆತನದ ಎವಿಎಸ್ ಎಂಟರ್‌ಪ್ರೈಸಸ್ ಎಂಬ ನಕಲಿ ಸಂಸ್ಥೆಗೆ ಕಾನೂನುಬಾಹಿರವಾಗಿ ಕಾರ್ಯಾದೇಶ ನೀಡಿ ಅಕ್ರಮ ಎಸಗಿದ್ದಾರೆ. ಅಲ್ಲದೆ, ಸಿಬ್ಬಂದಿಗೆ ವೇತನ ಪಾವತಿಸದೆ ಲೋಪ ಎಸಗಿದ್ದಾರೆ. ಕಾರ್ಯಾದೇಶ ನೀಡಿರುವ ಸಂಸ್ಥೆಯ ಮಾಲೀಕರು ತಮ್ಮ ಮಗನಾಗಿರುವ ಬಗ್ಗೆ ಲಿಖಿತ ಹೇಳಿಕೆ ನೀಡಲು ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರು 2023ರಂದು ಪತ್ರ ನೀಡಿದ್ದರೂ ವಿವರಣೆ ಸಲ್ಲಿಸಿಲ್ಲ’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
‘ನಾಗರಿಕ ಸೇವಾ ನಡತೆ ನಿಯಮಗಳ ಉಲ್ಲಂಘನೆ ಮಾಡಿದ್ದು, ಗಂಭೀರ ಕರ್ತವ್ಯ ಲೋಪ ಎಸಗಿರುವ ನಿಮ್ಮ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಲಾಗಿದೆ.
‘ಡಾ. ಎಸ್.ಕೆ. ಸವಿತಾ ಅವರಿಗೆ ಕಾರಣ ಕೇಳುವ ನೋಟಿಸ್ ಅನ್ನು ನೀಡಿ, ಅವರಿಂದ ದಿನಾಂಕ ಸಹಿತ ಸಹಿ ಪಡೆದು ಕಳುಹಿಸಿಕೊಡಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.