ADVERTISEMENT

ಬೆಂಗಳೂರು: ನೆಹರೂ ಪ್ರತಿಮೆ ಮರು ಸ್ಥಳಾಂತರ ಆರಂಭ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 21:09 IST
Last Updated 25 ಜೂನ್ 2021, 21:09 IST
ವಿಧಾನಸೌಧದ ಮುಂಭಾಗದಲ್ಲಿ ಜವಾಹರ ಲಾಲ್‌ ನೆಹರೂ ಅವರ ಪ್ರತಿಮೆಯನ್ನು ಹಿಂದೆ ಇದ್ದ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ಶುಕ್ರವಾರದಿಂದ ಆರಂಭವಾಗಿದೆ– ಪ್ರಜಾವಾಣಿ ಚಿತ್ರ
ವಿಧಾನಸೌಧದ ಮುಂಭಾಗದಲ್ಲಿ ಜವಾಹರ ಲಾಲ್‌ ನೆಹರೂ ಅವರ ಪ್ರತಿಮೆಯನ್ನು ಹಿಂದೆ ಇದ್ದ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ಶುಕ್ರವಾರದಿಂದ ಆರಂಭವಾಗಿದೆ– ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೆಟ್ರೊ ರೈಲು ಕಾಮಗಾರಿಗಾಗಿ ವಿಧಾನಸೌಧದ ಮುಂಭಾಗದಿಂದ ತೆರವುಗೊಳಿಸಿದ್ದ ಜವಹಾರ ಲಾಲ್‌ ನೆಹರೂ ಅವರ ಪ್ರತಿಮೆಯನ್ನು ಪುನಃ ಅದೇ ಸ್ಥಳಕ್ಕೆ ತಂದಿಡುವ ಕಾರ್ಯ ಶುಕ್ರವಾರದಿಂದ ಆರಂಭವಾಗಿದೆ.

ನೆಲದಡಿಯ ಸುರಂಗ ಮಾರ್ಗವನ್ನು ಕೊರೆಯುವುದಕ್ಕಾಗಿ ಡಾ.ಬಿ.ಆರ್‌. ಅಂಬೇಡ್ಕರ್‌, ನೆಹರೂ ಮತ್ತು ಸುಭಾಷ್‌ಚಂದ್ರ ಬೋಸ್‌ ಪ್ರತಿಮೆಗಳನ್ನು ಸ್ಥಳಾಂತರ ಮಾಡಲಾಗಿತ್ತು. ಅವುಗಳಲ್ಲಿ ಅಂಬೇಡ್ಕರ್‌ ಪ್ರತಿಮೆಯನ್ನು ಮಾತ್ರ ಅದೇ ಸ್ಥಳಕ್ಕೆ ತಂದಿಡಲಾಗಿತ್ತು. ನೆಹರೂ ಪ್ರತಿಮೆಯನ್ನೂ ಪುನಃ ಅಲ್ಲಿಯೇ ತಂದಿಡಬೇಕೆಂಬ ಒತ್ತಾಯ ಹಲವು ಬಾರಿ ಕೇಳಿಬಂದಿತ್ತು.

ಮೊದಲು ಪ್ರತಿಮೆ ಇದ್ದ ಸ್ಥಳದಲ್ಲೇ ಈಗ ಪೀಠ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅಲ್ಲಿ ಅಳವಡಿಸುವುದಕ್ಕಾಗಿ ನೆಹರೂ ಪ್ರತಿಮೆಯನ್ನು ಶುಕ್ರವಾರ ಬೆಳಿಗ್ಗೆ ಕ್ರೇನ್‌ ಸಹಾಯದಿಂದ ಕಾಮಗಾರಿ ಸ್ಥಳಕ್ಕೆ ತರಲಾಗಿದೆ. ಒಂದೆರಡು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ADVERTISEMENT

‘ಹೈಕೋರ್ಟ್‌ ನಿರ್ದೇಶನದಂತೆ ಪ್ರತಿಮೆಯನ್ನು ಪುನರ್‌ ಸ್ಥಾಪಿಸಲಾಗುತ್ತಿದೆ. ಶುಕ್ರವಾರ ಬೆಳಿಗ್ಗೆಯೇ ಪ್ರತಿಮೆ ಸ್ಥಳಾಂತರ ಆರಂಭಿಸಲಾಗಿತ್ತು. ಸಂಚಾರ ದಟ್ಟಣೆ ಕಾರಣದಿಂದ ಕೆಲಸ ಪೂರ್ಣಗೊಂಡಿಲ್ಲ. ಶನಿವಾರ ಅಥವಾ ಭಾನುವಾರ ಈ ಕೆಲಸ ಪೂರ್ಣಗೊಳ್ಳಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.