ಪೀಣ್ಯ ದಾಸರಹಳ್ಳಿ: ಒಂದೂವರೆ ವರ್ಷದ ಹಿಂದೆ ಆರಂಭವಾಗಿದ್ದ ನೆಲಗದರನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗಿದೆ.
ಸದ್ಯಕ್ಕೆ ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ. ಕೆರೆಯ ಸುತ್ತಲೂ ನಡಿಗೆ ಪಥ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ತ್ಯಾಜ್ಯ ನೀರು ಸೇರದಂತೆ ತಡೆಯುವ ಕೊಳವೆಗಳ ಅನುಷ್ಠಾನ, ತಂತಿ ಬೇಲಿ ಮತ್ತು ಗೇಟ್ ಹಾಕುವ ಕಾರ್ಯ ಹಾಗೂ ಶೌಚಾಲಯ ನಿರ್ಮಾಣ ಕಾರ್ಯ ಬಾಕಿ ಇದೆ.
ನೆಲಗದರನಹಳ್ಳಿ ಭಾಗದ ಜನರ ಜೀವನಾಡಿಯಂತಿದ್ದ ಈ ಕೆರೆಗೆ ಕೈಗಾರಿಕೆಗಳ ತ್ಯಾಜ್ಯ ಮತ್ತು ಒಳಚರಂಡಿ ನೀರು ಹರಿದು, ಕೆರೆಯ ನೀರು ಕಲುಷಿತಗೊಂಡಿತ್ತು. ಕೆರೆಯಲ್ಲಿನ ಜಲಚರಗಳಿಗೂ ಧಕ್ಕೆ ಉಂಟಾಗಿತ್ತು. ಕೆರೆ ಸ್ವಚ್ಛಗೊಳಿಸಿ, ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದರು.
ಜನರ ಮನವಿಗೆ ಸ್ಪಂದಿಸಿದ ಸರ್ಕಾರ, ಒಂದೂವರೆ ವರ್ಷದ ಹಿಂದೆ ಅಮೃತ ನಗರೋತ್ಥಾನದ ಅನುದಾನದಲ್ಲಿ ಕೆರೆ ಅಭಿವೃದ್ಧಿಗಾಗಿ ₹4 ಕೋಟಿ ಅನುದಾನ ಬಿಡುಗಡೆ ಮಾಡಿತು. ಕೆರೆಯ ಅಭಿವೃದ್ಧಿ ಕಾರ್ಯಗಳು ಆರಂಭವಾದವು. ಆದರೆ ಕಾಮಗಾರಿ ಕುಟುಂತ್ತಾ ಸಾಗಿದೆ. ‘ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿದರೆ, ಈ ಮಳೆಗಾಲದಲ್ಲಿ ಕೆರೆ ತುಂಬುತ್ತದೆ. ಸುತ್ತಲಿನ ಅಂತರ್ಜಲ ವೃದ್ಧಿಗೆ ಸಹಾಯವಾಗುತ್ತದೆ‘ ಎಂಬುದು ಸ್ಥಳೀಯರು ಅಭಿಪ್ರಾಯವಾಗಿದೆ.
‘ಕೆರೆ ಅಭಿವೃದ್ಧಿ ಕಾರ್ಯಗಳನ್ನು ಬೇಗ ಪೂರ್ಣಗೊಳಿಸಿದರೆ, ಸುತ್ತಮುತ್ತಲಿನ ಪರಿಸರವೂ ಸ್ವಚ್ಛವಾಗುತ್ತದೆ. ವಾಯು ವಿಹಾರಿಗಳಿಗೆ ತುಂಬಾ ಅನುಕೂಲವಾಗುತ್ತದೆ‘ ಎಂದು ನೆಲಗದರನಹಳ್ಳಿ ಧರ್ಮಶ್ರೀ ಮಂಜುನಾಥ್ ಹೇಳಿದರು.
‘ಶೀಘ್ರ ಪೂರ್ಣ’ ನೆಲಗದರನಹಳ್ಳಿ ಕೆರೆ 19 ಎಕರೆ 22 ಗುಂಟೆ ವಿಸ್ತೀರ್ಣವಿದ್ದು ಅದರಲ್ಲಿ 3 ಎಕರೆ 17 ಗುಂಟೆ ಒತ್ತುವರಿಯಾಗಿದೆ. ಒತ್ತುವರಿ ತೆರವು ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಪಕ್ಕದ ಕಾಲೊನಿಯ ಚರಂಡಿ ನೀರನ್ನು ಮತ್ತೆ ಕೆರೆಗೆ ಬಿಡುತ್ತಿದ್ದಾರೆ. ಅದನ್ನು ತಡೆಯಲಾಗುತ್ತದೆ. ಮಳೆ ಬರದಿದ್ದರೆ ಈ ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ‘ ಎಂದು ಸಹಾಯಕ ಎಂಜಿನಿಯರ್ ಶ್ರೀಧರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.