ADVERTISEMENT

ನೆಲಮಂಗಲ ತಾಲ್ಲೂಕಿನ ಕಾಚನಹಳ್ಳಿ | ತಮಟೆ ಬಾರಿಸಲು ನಿರಾಕರಿಸಿದ ದಲಿತರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 19:54 IST
Last Updated 9 ಸೆಪ್ಟೆಂಬರ್ 2019, 19:54 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ನೆಲಮಂಗಲ: ತಾಲ್ಲೂಕಿನ ಕಾಚನಹಳ್ಳಿಯಲ್ಲಿ ತಮಟೆ ಬಾರಿಸಲು ನಿರಾಕರಿಸಿದ ದಲಿತರ ಮೇಲೆ ಕೆಲವರು ಭಾನುವಾರ ರಾತ್ರಿ ಹಲ್ಲೆ ನಡೆಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಹಲ್ಲೆಗೆ ಒಳಗಾದ ಕೆಂಪರಾಜು, ನರಸಿಂಹಮೂರ್ತಿ, ನಾಗೇಂದ್ರ, ವೆಂಕಟೇಶ, ನಾಗರಾಜ, ನಾಗೇಶ ಎಂಬುವವರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ 10 ಮಂದಿಯ ವಿರುದ್ಧ ನೆಲಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಒಕ್ಕಲಿಗ ಸಮುದಾಯದ ಕೆಲವರು ನಮ್ಮ ಬಳಿ ಬಂದು, ಶುಭ– ಅಶುಭ ಸಮಾರಂಭಗಳಲ್ಲಿ ನೀವು ತಮಟೆ ಬಾರಿಸುತ್ತ ಬಂದಿದ್ದೀರಿ. ಇನ್ನು ಮುಂದೆಯೂ ಅದನ್ನು ಮುಂದುವರಿಸುವಂತೆ ತಿಳಿಸಿದರು. ನಮಗೆ ಸಮಾಜದಲ್ಲಿ ಬೆಲೆ, ಗೌರವ ಸಿಗುವುದಿಲ್ಲ. ಹೀಗಾಗಿ, ಇನ್ನು ಮುಂದೆ ನಾವು ತಮಟೆ ಬಾರಿಸುವುದಿಲ್ಲ ಎಂದೆವು. ಆಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಟ್ಟಿಗೆ ತುಂಡುಗಳಿಂದ ಹಲ್ಲೆ ನಡೆಸಿದರು’ ಎಂದು ಹಲ್ಲೆಗೊಳಗಾದ ನಾಗರಾಜ ಅವರು ಹೇಳಿಕೆ ನೀಡಿದ್ದಾರೆ.

ADVERTISEMENT

ಗಂಗರಾಜು, ಸಿದ್ದಬೈರೆಗೌಡ, ಶ್ರೀನಿವಾಸ, ಪ್ರಸನ್ನಕುಮಾರ, ನವೀನಕುಮಾರ, ರಂಗಸ್ವಾಮಿ, ದೊಡ್ಡಣ್ಣ, ರಾಮಕೃಷ್ಣಯ್ಯ, ತಿಮ್ಮೇಗೌಡ ಮತ್ತು ಶಶಿಧರ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಜಿಲ್ಲಾಧಿಕಾರಿ ರವೀಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್‌ಪಿ ರವಿ ಚನ್ನಣ್ಣನವರ್ ಗ್ರಾಮಕ್ಕೆ ಭೇಟಿ ನೀಡಿ ಭದ್ರತೆಗೆ ಕ್ರಮ ಕೈಗೊಂಡರು. ಸ್ಥಳದಲ್ಲಿ ಮೀಸಲು ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದೆ.

ತಮಟೆ ಬಾರಿಸುವುದನ್ನು ನಿಲ್ಲಿಸಲು ನಿರ್ಧರಿಸಿದ್ದ ಗ್ರಾಮದ ದಲಿತ ವರ್ಗದ ಕೆಲವರು, ಅವುಗಳನ್ನು ಸುಟ್ಟು ಹಾಕಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.