ADVERTISEMENT

2 ಕೆ.ಜಿ ಚಿನ್ನ, ನಗದು ದೋಚಿ ಪರಾರಿ: ಕೆಲಸಕ್ಕಿದ್ದ ಮನೆಯಲ್ಲೇ ನೇಪಾಳ ದಂಪತಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:37 IST
Last Updated 1 ಜೂನ್ 2025, 15:37 IST
ರಾಜ್
ರಾಜ್   

ಬೆಂಗಳೂರು: ಕೆಲಸ ಮಾಡುತ್ತಿದ್ದ ಉದ್ಯಮಿಯ ಮನೆಯಲ್ಲಿಯೇ ನೇಪಾಳ ದಂಪತಿ ಸುಮಾರು ₹1.90 ಕೋಟಿ ಮೌಲ್ಯದ 2 ಕೆ.ಜಿ ಚಿನ್ನ, ₹ 10 ಲಕ್ಷ ನಗದು, ಪಿಸ್ತೂಲ್ ದೋಚಿಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಎಚ್ಎಎಲ್‌ ಠಾಣೆ ವ್ಯಾಪ್ತಿಯ ಶಾಸ್ತ್ರಿನಗರದಲ್ಲಿರುವ ರಮೇಶ್ ಬಾಬು ಅವರ ಮನೆಯಲ್ಲಿ ಘಟನೆ ನಡೆದಿದೆ. ರಾಜ್ ಹಾಗೂ ದೀಪಾ ದಂಪತಿ ಪರಾರಿಯಾದವರು.

ಮೂರು ತಿಂಗಳ ಹಿಂದಷ್ಟೆ  ರಮೇಶ್ ಬಾಬು ಅವರ ಮನೆಯ ಭದ್ರತಾ ಸಿಬ್ಬಂದಿಯಾಗಿ ಹಾಗೂ ಮನೆಗೆಲಸಕ್ಕೆಂದು ರಾಜ್ ಮತ್ತು ದೀಪಾ ದಂಪತಿಯನ್ನು ನೇಮಿಸಿಕೊಳ್ಳಲಾಗಿತ್ತು. ಮೇ 27ರಂದು ರಮೇಶ್ ಬಾಬು ಅವರು ರಾಜ್ ದಂಪತಿಯನ್ನು ಮನೆಯಲ್ಲಿ ಬಿಟ್ಟು ಕುಟುಂಬ ಸಮೇತ ತಿರುಪತಿಗೆ ತೆರಳಿದ್ದರು. ಮೇ 28ರಂದು ಬೆಳಗಿನ ಜಾವ ರಮೇಶ್ ಅವರು ತಮ್ಮ ಮೊಬೈಲ್ ಫೋನ್ ಮೂಲಕ ಪರಿಶೀಲಿಸಿದಾಗ ಮನೆಯ ಸಿಸಿಟಿವಿ ಕ್ಯಾಮೆರಾಗಳು ಆಫ್ ಆಗಿರುವುದು ಕಂಡು ಬಂದಿತ್ತು.

ADVERTISEMENT

ವಿದ್ಯುತ್ ವ್ಯತ್ಯಯ ಆಗಿರಬಹುದು ಎಂದು ಭಾವಿಸಿದ್ದ ರಮೇಶ್ ಬಾಬು ಅವರು, ತಿರುಪತಿಯಲ್ಲಿಯೇ ಕುಟುಂಬದವರೊಂದಿಗೆ ದೇವರ ದರ್ಶನಕ್ಕೆ ತೆರಳಿದರು. ಬೆಳಿಗ್ಗೆ 11 ಗಂಟೆಗೆ ಪಕ್ಕದ ಮನೆ ನಿವಾಸಿಯೊಬ್ಬರು ರಮೇಶ್ ಅವರ ಪತ್ನಿಗೆ  ಕರೆ ಮಾಡಿ, ‘ನಿಮ್ಮ ಮನೆ ಗೇಟ್‌ ಮತ್ತು ಬಾಗಿಲು ತೆರೆದಿದ್ದು, ಕೂಗಿದರೂ ಯಾರೂ ಮಾತನಾಡಲಿಲ್ಲ’ ಎಂದು  ತಿಳಿಸಿದ್ದರು. ತಕ್ಷಣ ಎಚ್ಚೆತ್ತ ರಮೇಶ್‌, ತಮ್ಮ ಸ್ನೇಹಿತರನ್ನು ಮನೆ ಬಳಿ ಕಳುಹಿಸಿ ಪರಿಶೀಲಿಸಿದಾಗ ಮನೆಯ‌ ಮುಖ್ಯದ್ವಾರ, ಬೆಡ್ ರೂಮ್ ಬಾಗಿಲುಗಳನ್ನು ಮುರಿದು ಕಳ್ಳತನ ಮಾಡಿರುವುದು ಗೊತ್ತಾಗಿದೆ. 

ದಂಪತಿ ಸೇರಿ ಐವರು ಮನೆ ಬಳಿ ಬಂದ ಕಾರಿನಲ್ಲಿ ಚಿನ್ನಾಭರಣ, ಹಣದ ಬ್ಯಾಗ್‌ಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯ ಮನೆಯ ಸುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಈ ಬಗ್ಗೆ ರಮೇಶ್ ಬಾಬು ಎಚ್ಎಎಲ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೀಪಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.