ADVERTISEMENT

ಬೋಸ್‌ ಜೀವನ ಚರಿತ್ರೆಯ 1 ಲಕ್ಷ ಪ್ರತಿ ಹಂಚಿಕೆ: ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 12:50 IST
Last Updated 23 ಜನವರಿ 2022, 12:50 IST
ಕಾರ್ಯಕ್ರಮದಲ್ಲಿ (ಎಡದಿಂದ) ಶಿಲ್ಪಾ ಶ್ರೀಧರ್, ಸಿ.ಸೋಮಶೇಖರ್, ವಿ.ಸೋಮಣ್ಣ ಮತ್ತು ವಿಶ್ವನಾಥಗೌಡ ಅವರು ನೇತಾಜಿ ಸುಭಾಷ್‌ ಚಂದ್ರ ಬೋಸ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು - ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ಶಿಲ್ಪಾ ಶ್ರೀಧರ್, ಸಿ.ಸೋಮಶೇಖರ್, ವಿ.ಸೋಮಣ್ಣ ಮತ್ತು ವಿಶ್ವನಾಥಗೌಡ ಅವರು ನೇತಾಜಿ ಸುಭಾಷ್‌ ಚಂದ್ರ ಬೋಸ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ ಏಕತೆ, ಸಮಗ್ರತೆಯ ಹರಿಕಾರರಾಗಿದ್ದ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಜೀವನ ಚರಿತ್ರೆ 1ಲಕ್ಷ ಪ್ರತಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುವುದು’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ವಿ.ಸೋಮಣ್ಣ ಪ್ರತಿಷ್ಣಾನದ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ, ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ 125ನೇ ಜಯಂತಿ ಕಾರ್ಯಕ್ರಮದಲ್ಲಿ ಬೋಸ್‌ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿದ್ದ ಬೋಸ್‌, ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದ್ದರು.ಬ್ರಿಟಿಷರ ವಿರುದ್ಧದ ಹೋರಾಟಕ್ಕಾಗಿ ಜೀವನವನ್ನೇ ಸಮರ್ಪಣೆ ಮಾಡಿಕೊಂಡ ಅವರ ಆದರ್ಶ ಇಂದಿನ ಯುವಜನರಿಗೆ ಸ್ಫೂರ್ತಿಯಾಗಬೇಕು’ ಎಂದರು.

ADVERTISEMENT

‘ಎರಡನೆಯ ಜಾಗತಿಕ ಮಹಾಯುದ್ಧದ ನಂತರ ಭಾರತದ ಸ್ವಾತಂತ್ರ್ಯ ಮತ್ತು ಸಮಗ್ರತೆ ಬಗ್ಗೆ ಇಡೀ ಜಗತ್ತೇ ಚಿಂತನೆ ಮಾಡುವಂತಾಯಿತು. ‌‌‌ದೇಶವು ಇಂದು ಬಲಿಷ್ಠವಾಗಿದ್ದರೆ, ಅದಕ್ಕೆ ಬೋಸ್‌ ಅವರಂತಹ ಮಹನೀಯರಗಳ ತ್ಯಾಗ ಬಲಿದಾನಗಳೇ ಕಾರಣ’ ಎಂದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್, ‘ವೈಯಕ್ತಿಕ ಜೀವನವನ್ನು ಬದಿಗಿಟ್ಟು ದೇಶ ಸೇವೆಯನ್ನು ಆಯ್ಕೆ ಮಾಡಿದ್ದ ಬೋಸ್‌, ಇಂಡಿಯನ್‌ ನ್ಯಾಷನಲ್‌ ಆರ್ಮಿಯನ್ನು ಕಟ್ಟಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಅವರು ಅಗ್ರಗಣ್ಯ ನಾಯಕ’ ಎಂದರು.

ಪ್ರತಿಷ್ಠಾನದ ಖಜಾಂಚಿ ನವೀನ್ ಸೋಮಣ್ಣ, ಮುಖಂಡರಾದ ನಾರಾಯಣಸ್ವಾಮಿ, ಎಂ.ಸಿ.ಬಡಾವಣೆ ಸಂಘದ ಸಿದ್ದಲಿಂಗಯ್ಯ, ಬಿಜೆಪಿಯ ಗೋವಿಂದರಾಜನಗರ ಮಂಡಲ ಅಧ್ಯಕ್ಷ ವಿಶ್ವನಾಥಗೌಡ, ಕನ್ನಡ ಹೋರಾಟಗಾರ ಪಾಲನೇತ್ರ , ಸ್ಥಳೀಯ ಪ್ರಮುಖರಾದ ಶಿಲ್ಪಾ ಶ್ರೀಧರ್, ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ವಾಗೇಶ್, ಡಾ.ಎಸ್.ರಾಜು , ರೂಪಾ ಲಿಂಗೇಶ್ವರ್, ಪಲ್ಲವಿ, ದಾಸೇಗೌಡ, ರಾಜಪ್ಪ, ಕೊಳಚೆ ನಿರ್ಮೂಲನೆ ಮಂಡಳಿ ನಿರ್ದೇಶಕ ಕ್ರಾಂತಿ ರಾಜು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.