ADVERTISEMENT

ಮಹಾರಾಣಿ ಕ್ಲಸ್ಟರ್‌ ವಿ.ವಿ: ₹55 ಕೋಟಿ ಅನುದಾನ; ಹೊಸ ವಿಭಾಗ ಉದ್ಘಾಟನೆಗೆ ಸಜ್ಜು

ಎ.ಎಂ.ಸುರೇಶ
Published 5 ಆಗಸ್ಟ್ 2025, 22:53 IST
Last Updated 5 ಆಗಸ್ಟ್ 2025, 22:53 IST
<div class="paragraphs"><p>ಮೆಗಾ ವಸತಿ ನಿಲಯದ ಹೊರ ನೋಟ</p></div>

ಮೆಗಾ ವಸತಿ ನಿಲಯದ ಹೊರ ನೋಟ

   

ಬೆಂಗಳೂರು: ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ನೂತನ ಶೈಕ್ಷಣಿಕ ವಿಭಾಗ ಸಿದ್ಧವಾಗಿದ್ದು, ಇದೇ ತಿಂಗಳಲ್ಲಿ ಉದ್ಘಾಟನೆಯಾಗಲಿದೆ.

ರೂಸಾ ಯೋಜನೆಯಡಿ ವಿಶ್ವವಿದ್ಯಾ
ಲಯಕ್ಕೆ ₹55 ಕೋಟಿ ಅನುದಾನ ಮಂಜೂರಾಗಿತ್ತು. ಈ ಪೈಕಿ ₹8 ಕೋಟಿ
ವೆಚ್ಚದಲ್ಲಿ ಶೈಕ್ಷಣಿಕ ವಿಭಾಗ ನಿರ್ಮಿಸಿದ್ದು, ನೆಲ ಮಹಡಿ, ಮೊದಲ ಹಾಗೂ ಎರಡನೇ ಮಹಡಿಯಲ್ಲಿ 20 ಕೊಠಡಿಗಳು ಇವೆ. ಸ್ನಾತಕೋತ್ತರ ಕೋರ್ಸ್‌ಗಳ ತರಗತಿಗಳಿಗೆ ಇವು ಬಳಕೆಯಾಗಲಿವೆ.

ADVERTISEMENT

‘ಪಿಎಂ ಉಷಾ ಯೋಜನೆಯಡಿ ₹19.77 ಕೋಟಿ ಅನುದಾನ ಬಂದಿದ್ದು, ವಿಶ್ವವಿದ್ಯಾಲಯದ ಅಧೀನದಲ್ಲಿ ಇರುವ ವಿಎಚ್‌ಡಿ ಕೇಂದ್ರೀಯ ಗೃಹ ವಿಜ್ಞಾನ ಕಾಲೇಜಿನಲ್ಲಿ ಶೈಕ್ಷಣಿಕ ವಿಭಾಗ ನಿರ್ಮಿಸಲಾಗುತ್ತದೆ. ಇದಲ್ಲದೆ ಕ್ಲಸ್ಟರ್‌ ವಿ.ವಿ ಆವರಣದಲ್ಲಿನ ಶೈಕ್ಷಣಿಕ ವಿಭಾಗದ ಮೇಲೆ ಇನ್ನೂ ಎರಡು ಮಹಡಿಗಳನ್ನು ನಿರ್ಮಿಸುವ ಉದ್ದೇಶವಿದೆ.

ಈ ಕಾರ್ಯ ಪೂರ್ಣಗೊಂಡ ನಂತರ
ಇನ್ನಷ್ಟು ಕೋರ್ಸ್‌ಗಳನ್ನು ಆರಂಭಿ
ಸುತ್ತೇವೆ’ ಎಂದು ಹಂಗಾಮಿ ಕುಲಪತಿ ಟಿ.ಎಂ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ಕೋರ್ಸ್‌: ಮುಂಬರುವ ಶೈಕ್ಷಣಿಕ ಸಾಲಿನಿಂದ (2026–27) ಐದು ವರ್ಷದ ಎಲ್‌ಎಲ್‌ಬಿ, ಬಿ.ಇಡಿ ಸೇರಿದಂತೆ ಹೊಸ ಕೋರ್ಸ್‌ಗಳು ಆರಂಭವಾಗಲಿವೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಮಾಡುತ್ತಿದ್ದು, ಕೈಗೆಟುಕುವ ದರದಲ್ಲಿ ವಿದ್ಯಾರ್ಥಿಗಳು ಹೊಸ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ.

ಇದಲ್ಲದೆ ಮುಂದಿನ ವರ್ಷದಿಂದ ಪಿಎಚ್‌.ಡಿ ವ್ಯಾಸಂಗಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿ ಮಂಜೂರಾದ 272 ಬೋಧಕ ಹುದ್ದೆಗಳ ಪೈಕಿ 142 ಮಂದಿ ಕಾಯಂ ಬೋಧಕರಿದ್ದಾರೆ. ರಾಜ್ಯದ ಬೇರೆ ಯಾವುದೇ ವಿಶ್ವವಿದ್ಯಾಲಯದಲ್ಲಿ
ಇಷ್ಟೊಂದು ಸಂಖ್ಯೆಯಲ್ಲಿ ಕಾಯಂ ಬೋಧಕರಿಲ್ಲ. ಅತಿಥಿ ಉಪನ್ಯಾಸಕರ ಮೇಲೆ ಬಹುತೇಕ ವಿಶ್ವವಿದ್ಯಾಲಯಗಳು
ಅವಲಂಬನೆಯಾಗಿವೆ. ಆದರೆ, ನಮ್ಮ ವಿಶ್ವವಿದ್ಯಾಲಯದಲ್ಲಿ ಕಾಯಂ ಬೋಧಕರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆ ಇಲ್ಲ ಎಂದು ಮಂಜುನಾಥ್‌ ತಿಳಿಸಿದರು.

ವಿಶ್ವವಿದ್ಯಾಲಯದಲ್ಲಿ ಇದುವರೆಗೆ 22 ಸ್ನಾತಕೋತ್ತರ ವಿಭಾಗಗಳು ಇದ್ದವು. ಈ ವರ್ಷ ಕನ್ನಡ ಎಂ.ಎ ಶುರುವಾಗಿದೆ. ಇದೂ ಸೇರಿ 23 ವಿಭಾಗಗಳಿವೆ. ಡೇಟಾ ಸೈನ್ಸ್‌, ಕೃತಕ ಬುದ್ಧಿಮತ್ತೆಯ (ಎಐ) ಸ್ನಾತಕೋತ್ತರ ಕೋರ್ಸ್‌ಗಳು ಕಳೆದ ವರ್ಷ ಶುರುವಾಗಿದ್ದು, ಇದಕ್ಕೆ ಭಾರಿ ಬೇಡಿಕೆ ಇದೆ. ವಿವಿಧ ವಿಭಾಗಗಳಲ್ಲಿ ಸುಮಾರು ಐದು ಸಾವಿರ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ.

ಇದಲ್ಲದೆ ಬಿಎಸ್‌ಸಿ, ಬಿಸಿಎನಲ್ಲಿ ಡೇಟಾ ಸೈನ್ಸ್‌, ಕೃತಕ ಬುದ್ದಿಮತ್ತೆ ಕೋರ್ಸ್‌ಗಳಿದ್ದು, ಈಚೆಗೆ ಈ ಕೋರ್ಸ್‌
ಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ವಾರ್ಷಿಕ ₹35 ಸಾವಿರ ಶುಲ್ಕವನ್ನು ಈ ಕೋರ್ಸ್‌ಗಳಿಗೆ ನಿಗದಿಪಡಿಸಲಾಗಿದೆ.

ಮೆಗಾ ಹಾಸ್ಟೆಲ್‌: ₹15 ಕೋಟಿ ವೆಚ್ಚದಲ್ಲಿ ಮೆಗಾ ಹಾಸ್ಟೆಲ್‌ ನಿರ್ಮಾಣವಾಗಿದ್ದು,
1200 ವಿದ್ಯಾರ್ಥಿನಿಯರಿಗೆ ಪ್ರವೇಶ ಅವಕಾಶ ಕಲ್ಪಿಸಬಹುದು. ಸದ್ಯ 900 ವಿದ್ಯಾರ್ಥಿನಿಯರು ಇದ್ದಾರೆ.

ಹಿಂದೆ ಇದ್ದ ಎರಡು ಹಳೆಯ ಹಾಸ್ಟೆಲ್‌ ಕಟ್ಟಡಗಳನ್ನು ನವೀಕರಿಸಬೇಕಾಗಿದೆ. ಈ ಕೆಲಸ ಪೂರ್ಣವಾದರೆ ಇನ್ನೂ 800 ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಬಹುದು. ಪಿಎಂ ಉಷಾ ಯೋಜನೆಯಡಿ ಮಂಜೂರಾಗಿರುವ ಅನುದಾನವನ್ನು ನವೀಕರಣಕ್ಕೆ ಬಳಸಿಕೊಳ್ಳಲಾಗುತ್ತದೆ. ಸಂಶೋಧನಾ ವಿದ್ಯಾರ್ಥಿನಿಯರಿಗೆ, ಹೊಸ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಇಲ್ಲಿ ವಸತಿ ವ್ಯವಸ್ಥೆ ಮಾಡಿಕೊಡುವ ಉದ್ದೇಶವನ್ನು ವಿ.ವಿ ಹೊಂದಿದೆ.

ಇನ್ನೂ ಬಾರದ ಅನುದಾನ

ಹಳೆಯ ಕಟ್ಟಡಗಳಲ್ಲಿಎಲೆಕ್ಟ್ರಿಕಲ್‌ ಕೆಲಸಗಳಿಗಾಗಿ ₹3.4 ಕೋಟಿ, ಸಿವಿಲ್‌ ಕಾಮಗಾರಿಗಳಿಗೆ ₹2.5 ಕೋಟಿ, ಅಭಿವೃದ್ಧಿ ಕಾರ್ಯಗಳಿಗೆ ₹7 ಕೋಟಿ, ಎಸ್‌ಸಿಎಸ್‌ಟಿ–ಟಿಎಸ್‌ಪಿ ಯೋಜನೆಯಡಿ ₹3.7 ಕೋಟಿ ಸೇರಿದಂತೆ ಒಟ್ಟು 20.9 ಕೋಟಿ ಅನುದಾನ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಇನ್ನೂ ಅನುದಾನ ಮಂಜೂರಾಗಿಲ್ಲ. ಸರ್ಕಾರ ಆದಷ್ಟು ಬೇಗ ಅನುದಾನ ನೀಡಿದರೆ ವಿದ್ಯಾರ್ಥಿನಿಯರಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡಬಹುದು ಎಂದು ಮಂಜುನಾಥ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.