ADVERTISEMENT

ಯಶವಂತಪುರ–ಮಂಗಳೂರು ಗೋವಾಕ್ಕೆ ಹೊಸ ರೈಲು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 19:27 IST
Last Updated 11 ಫೆಬ್ರುವರಿ 2020, 19:27 IST

ಬೆಂಗಳೂರು: ಯಶವಂತಪುರದಿಂದ ‌ಹಾಸನ, ಮಂಗಳೂರು ಮಾರ್ಗದಲ್ಲಿ ‌ಗೋವಾಕ್ಕೆ ಹೊಸದಾಗಿ ಎ‌ಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಗೊಳ್ಳಲಿದ್ದು, ಬುಧವಾರ ರೈಲ್ವೆ ಇಲಾಖೆ ಅಧಿಕೃತ ವಾಗಿ ಘೋಷಣೆ ಮಾಡಲಿದೆ.

ವೇಳಾಪಟ್ಟಿ ಸಹಿತ ವಿವರವನ್ನು ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 10.30ಕ್ಕೆ ಗೋವಾದ ವಾಸ್ಕೋಡಗಾಮ ರೈಲು ನಿಲ್ದಾಣ ತಲುಪಲಿದೆ. ಹಾಸನಕ್ಕೆ ರಾತ್ರಿ 9.50, ಮಂಗಳೂರಿಗೆ ಬೆಳಗಿನ ಜಾವ 3.30, ಉಡುಪಿಗೆ 4.49, ಮುರುಡೇಶ್ವರಕ್ಕೆ 6.12 ಹಾಗೂ ಕಾರವಾರಕ್ಕೆ 8.25ಕ್ಕೆ ತಲುಪಲಿದೆ.

ಸಂಜೆ 4.40ಕ್ಕೆ ಗೋವಾದಿಂದ ಹೊರಡುವ ರೈಲು ಬೆಳಿಗ್ಗೆ 9ಕ್ಕೆ ಯಶವಂತಪುರ ತಲುಪಲಿದೆ. ಪ್ರತಿದಿನ ರೈಲು ಸಂಚಾರ ಇರಲಿದೆ.

ADVERTISEMENT

‘ಹೊಸ ರೈಲು ಸಂಚಾರ ಆರಂಭಕ್ಕೆ ಯಾವಾಗ ಚಾಲನೆ ದೊರೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಧಿಕೃತ ವೇಳಾಪಟ್ಟಿ ಬುಧವಾರ ಬಿಡುಗಡೆ ಆಗಲಿದೆ. ಸಂಸದರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೇಳಾಪಟ್ಟಿಯೇ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ’ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಯಾವ ವೇಳೆಯಲ್ಲಿ ರೈಲು ಸಂಚರಿಸಲು ಅವಕಾಶ ಇದೆ, ಪ್ರಯಾಣಿಕರಿಗೆ ಎಷ್ಟು ಅನುಕೂಲ ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಯಶವಂತಪುರದಿಂದ ಹಾಸನಕ್ಕೆ ಸಂಜೆ 6.15 ಈಗಾಗಲೇ ಒಂದು ರೈಲು ಸಂಚರಿಸುತ್ತಿದೆ. ಇದೇ ರೈಲು ಬೆಳಿಗ್ಗೆ 6.10ಕ್ಕೆ ಹಾಸನದಿಂದ ಯಶವಂತಪುರಕ್ಕೆ ಸಂಚರಿಸುತ್ತಿದೆ. ಹೊಸ ರೈಲು ಕೂಡ ಬೆಳಿಗ್ಗೆ 6ಕ್ಕೆ ಹಾಸನಕ್ಕೆ ಬರಲಿದೆ. ಬಹುತೇಕ ಎರಡೂ ರೈಲುಗಳು ಏಕಕಾಲದಲ್ಲೇ ಸಂಚರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.