ADVERTISEMENT

ಮೆಡಿಕಲ್‌ ಟೂರಿಸಂಗೆ ಹೊಸ ರೂಪ

ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2018, 11:16 IST
Last Updated 25 ಜುಲೈ 2018, 11:16 IST
   

ಬೆಂಗಳೂರು: ನಗರವನ್ನು ವೈದ್ಯಕೀಯ ಪ್ರವಾಸಿ ತಾಣವನ್ನಾಗಿ (ಮೆಡಿಕಲ್‌ ಟೂರಿಸಂ) ರೂಪಿಸುವ ಚಿಂತನೆಗೆ ಹೊಸ ರೂಪ ನೀಡಲಾಗುವುದು ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯಲ್ಲಿ ಎಂಆರ್‌ಐ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಮೆಡಿಕಲ್‌ ಟೂರಿಸಂ ಪರಿಕಲ್ಪನೆ ಜಾರಿಗೆ ಬಂದಿತ್ತು. ಆದರೆ, ಸರಿಯಾದ ಯೋಜನೆ, ಅನುಷ್ಠಾನದ ಸಮಸ್ಯೆಯಿಂದ ಸ್ವಲ್ಪ ಹಿನ್ನಡೆಯಾಯಿತು. ಹೊರ ರಾಜ್ಯದಿಂದ ಬಂದವರು ಇಲ್ಲಿ ತರಬೇತಿ ಪಡೆದು ಮತ್ತೆ ವಾಪಸ್‌ ಹೋಗುತ್ತಿದ್ದರು. ಇದರಿಂದ ರಾಜ್ಯಕ್ಕೇನೂ ಪ್ರಯೋಜನ ಆಗುತ್ತಿರಲಿಲ್ಲ. ಈಗ ಆ ಪರಿಕಲ್ಪನೆಯಲ್ಲಿ ಹೊಸತನ ತರಲು ಮುಂದಾಗಿದ್ದೇವೆ’ ಎಂದರು.

‘ವೈದ್ಯಕೀಯ ಕ್ಷೇತ್ರಕ್ಕೆ ಪೂರಕ ಸಿಬ್ಬಂದಿ ವ್ಯವಸ್ಥೆ ಬೇಕು. ಅದಕ್ಕಾಗಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದವರಿಗೆ ವಿಶೇಷ ಕೋರ್ಸ್‌ ಆರಂಭಿಸಬಹುದೇ ಎಂದು ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದೇನೆ. ಈ ರೀತಿ ಮಾಡಿದರೆ ನಿರುದ್ಯೋಗ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆ ಆದೀತು ಎಂಬ ಆಶಾವಾದವಿದೆ. ಈ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲವನ್ನು ಇನ್ನಷ್ಟು ಬಲಪಡಿಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ನೀಟ್‌ ಪರೀಕ್ಷಾ ವ್ಯವಸ್ಥೆ ಬಂದ ಬಳಿಕ ರಾಜ್ಯದ ವಿದ್ಯಾರ್ಥಿಗಳಿಗೆ ಶೇ 5ರಷ್ಟು ಸೀಟುಗಳೂ ಸಿಗುತ್ತಿರಲಿಲ್ಲ.ರಾಜ್ಯದ ವಿದ್ಯಾರ್ಥಿಗಳಿಗೆ ಶೇ 50ರಷ್ಟು ಮೀಸಲಾತಿ ಕೊಡಬೇಕು ಎಂದು ಡೀಮ್ಡ್‌ ವಿಶ್ವವಿದ್ಯಾಲಯಗಳಿಗೆ ಕೋರಿದ್ದೆ. ಮುಂದಿನ ವರ್ಷವಾದರೂ ಈ ಕೋರಿಕೆ ಈಡೇರಬಹುದು’ ಎಂಬ ನಿರೀಕ್ಷೆ ಇದೆ ಎಂದರು.

‘ಉಚಿತವಾಗಿ ಸೀಟು ಪಡೆದವರು ಕನಿಷ್ಠ ಒಂದು ವರ್ಷವಾದರೂ ಗ್ರಾಮೀಣ ಸೇವೆ ಮಾಡಲೇಬೇಕು. ಇದೇ ನಿಯಮ ಸ್ನಾತಕೋತ್ತರ ಪದವೀಧರರಿಗೂ ಅನ್ವಯಿಸುತ್ತದೆ’ ಎಂದು ಹೇಳಿದರು.

ರಾಮನಗರದಲ್ಲಿ ರಾಜೀವಗಾಂಧಿ ಆರೋಗ್ಯ ವಿವಿಯ ಕ್ಯಾಂಪಸ್‌ ನಿರ್ಮಾಣವಾಗುತ್ತಿದೆ. ಬೆಂಗಳೂರು ನಗರಕ್ಕಿಂತ ರಾಮನಗರವೇ ಉತ್ತಮ. ಅಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.