ADVERTISEMENT

ಹೊಸ ವರ್ಷಾಚರಣೆ: ಹೈ ಅಲರ್ಟ್‌

ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕಮಿಷನರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 19:41 IST
Last Updated 24 ಡಿಸೆಂಬರ್ 2018, 19:41 IST

ಬೆಂಗಳೂರು: ಹೊಸ ವರ್ಷಾಚರಣೆಗೆ ವಾರವಷ್ಟೇ ಬಾಕಿ ಇದೆ. ಡಿ. 31ರಂದು ರಾತ್ರಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೆಚ್ಚು ಜನರು ಸೇರುವ ಸ್ಥಳ, ಪಬ್, ರೆಸ್ಟೋರೆಂಟ್, ಕ್ಲಬ್‌ಗಳ ಸುತ್ತಮುತ್ತ ಹೈ ಅಲರ್ಟ್‌ ಘೋಷಿಸಿ ಭದ್ರತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ ಕುಮಾರ್ ಅವರು ಎಲ್ಲ ವಿಭಾಗಗಳ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.

‘ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ಕಬ್ಬನ್ ಪಾರ್ಕ್‌ ರಸ್ತೆ, ಶಿವಾಜಿನಗರದಲ್ಲಿ ಹೊಸ ವರ್ಷಾಚರಣೆಗೆ ಸಾವಿರಾರು ಜನ ಸೇರುತ್ತಾರೆ. ಅವರನ್ನು ನಿಯಂತ್ರಿಸಲು ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಿ. ಮಾದಕ ವಸ್ತು ಮಾರಾಟ, ವೇಶ್ಯಾವಾಟಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳ ಮೇಲೂ ನಿಗಾ ವಹಿಸಿ’ ಎಂದು ಕಮಿಷನರ್‌ ಸೂಚಿಸಿದ್ದಾರೆ.

ADVERTISEMENT

ಒಂದೇ ಸ್ಥಳದಲ್ಲಿ ಆಚರಣೆಗೆ ಪತ್ರ: ಹೊಸ ವರ್ಷಾಚರಣೆ ವೇಳೆ ಬ್ರಿಗೇಡ್‌ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅಹಿತಕರ ಘಟನೆಗಳು ಪದೇ ಪದೇ ಸಂಭವಿಸುವುದನ್ನು ತಡೆಗಟ್ಟುವ ಉದ್ದೇಶದಿಂದ, ನಗರದ ಅರಮನೆ ಮೈದಾನದಲ್ಲಷ್ಟೇ ಗುಂಪು ಆಚರಣೆಗೆ ಅವಕಾಶ ನೀಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಆ ಸಂಬಂಧ ಗೃಹ ಇಲಾಖೆಗೆ ಪತ್ರ ಬರೆದಿರುವ ಹಿರಿಯ ಅಧಿಕಾರಿಗಳು, ‘ಹೊರ ದೇಶಗಳಲ್ಲಿ ಒಂದೇ ಜಾಗದಲ್ಲಿ ಎಲ್ಲರೂ ಸೇರಿ ಹೊಸ ವರ್ಷದ ಸಂಭ್ರಮ ಆಚರಿಸುವ ಪದ್ಧತಿ ಇದೆ. ಅಂಥ ಪದ್ಧತಿಯನ್ನು ಬೆಂಗಳೂರಿನಲ್ಲಿ ಜಾರಿಗೆ ತರಲು ಕ್ರಮ ಕೈಗೊಳ್ಳಿ’ ಎಂದು ಕೋರಿದ್ದಾರೆ ಎಂದು ಗೊತ್ತಾಗಿದೆ. ಈ ಮನವಿ ಪರಿಶೀಲನೆ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.