
ಬೆಂಗಳೂರು: ಮಲೆನಾಡು ಗಿಡ್ಡ ತಳಿಯ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನದ ವತಿಯಿಂದ ಡಿ. 7ರಂದು ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಯ ಮಲ್ಲಿಗಮ್ಮ ದೇವಸ್ಥಾನದ ಆವರಣದಲ್ಲಿ ಹೋರಿ ಹಬ್ಬ ನಡೆಯಲಿದೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಯಾನದ ಸಂಘಟಕ ಅಕ್ಷಯ್ ಆಳ್ವ, ‘ಮಲೆನಾಡು ಗಿಡ್ಡ ತಳಿ ಅಳವಿನಂಚಿನಲ್ಲಿದೆ. ಹೈನುಗಾರಿಕೆ ಕ್ರಾಂತಿಯಿಂದ ಮಲೆನಾಡು ಗಿಡ್ಡ ತಳಿಯನ್ನು ಸಾಕುವವರ ಸಂಖ್ಯೆ ಕಡಿಮೆ ಆಗಿದೆ. ಈ ತಳಿಯ ಜಾನುವಾರುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋರಿ ಹಬ್ಬವನ್ನು ಆಯೋಜಿಸಲಾಗುತ್ತಿದ್ದು, ಇದರಲ್ಲಿ ಮಲೆನಾಡು ಗಿಡ್ಡ ತಳಿಯ ಹೋರಿಗಳನ್ನು 50 ರೈತರಿಗೆ ಉಚಿತವಾಗಿ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ರಾಷ್ಟ್ರೀಯ ಗೋ ಸೇವಾ ಸಂಸ್ಥಾನದ ಅಧ್ಯಕ್ಷ ಭಕ್ತಿ ಭೂಷಣ್ ದಾಸ್ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮೀಜಿ ಅವರು ಸಮಾರಂಭದ ಸಾನ್ನಿಧ್ಯ ವಹಿಸಲಿದ್ದು, ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.
ಬೆಂಗಳೂರು: ಗರ್ಭಾಶಯ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ತಡೆಗಟ್ಟುವ ಉದ್ದೇಶದಿಂದ 2026ರ ಜನವರಿಯಲ್ಲಿ ಹೈಪರ್ ಸ್ಪೋರ್ಟ್ಸ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಕರ್ನಾಟಕ ಮೀಡಿಯಾ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಟೂರ್ನಿ ಆಯೋಜಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಕಿರಣ್ ಶೆಟ್ಟಿ, ‘ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರಿಗೆ ಮಾತ್ರ ಪಂದ್ಯಾವಳಿ ಮೀಸಲಾಗಿದೆ. ಮಹಿಳೆಯರಲ್ಲಿ ಗರ್ಭಾಶಯ ಕ್ಯಾನ್ಸರ್ ಗಂಭೀರ ಆರೋಗ್ಯ ಸಮಸ್ಯೆಯಾಗಿ ಉಳಿದಿದೆ. ಇದರ ಬಗ್ಗೆ ಮುಂಚಿತವಾಗಿ ತಪಾಸಣೆ ಹಾಗೂ ಎಚ್‌ಪಿವಿ ಲಸಿಕೆ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ’ ಎಂದು ವಿವರಿಸಿದರು.
‘ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ₹10 ಲಕ್ಷ, ಎರಡನೇ ಸ್ಥಾನ ಪಡೆಯುವ ತಂಡಕ್ಕೆ ₹5 ಲಕ್ಷ ಹಾಗೂ ಸೆಮಿ ಫೈನಲ್‌ನಲ್ಲಿ ಭಾಗವಹಿಸುವ ತಂಡಗಳಿಗೆ ತಲಾ ₹2.50 ಲಕ್ಷ ನಗದು ಬಹಮಾನವಾಗಿ ನೀಡಲಾಗುತ್ತದೆ. ತಂಡಗಳ ನೋಂದಣಿ, ಪಂದ್ಯಗಳ ವೇಳಾಪಟ್ಟಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.
ಬೆಂಗಳೂರು: ಯೂತ್ ಫಾರ್ ನೇಷನ್, ಸ್ವದೇಶಿ ಜಾಗರಣ ಸಹಯೋಗದಲ್ಲಿ ಇದೇ 13ರಿಂದ ಆರಂಭವಾಗುವ 3,500 ಕಿ.ಮೀ. ಸೈಕಲ್ ಜಾಥಾದಲ್ಲಿ ದೇಶೀಯ ಉದ್ಯಮಶೀಲತೆ, ಆತ್ಮ ನಿರ್ಭರತೆ ಮತ್ತು ಗ್ರಾಮ, ನಗರ ಪ್ರದೇಶದ ಆರ್ಥಿಕ ಬಲವರ್ಧನೆಯ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ನಿವೃತ್ತ ಬ್ರಿಗೇಡಿಯರ್ ರವಿ ಮುನಿಸ್ವಾಮಿ, ‘ಸ್ವದೇಶಿ ಚಳವಳಿಯಲ್ಲಿ ಯುವಕರ ಪಾತ್ರ ಹೆಚ್ಚಿಸಲು ಮತ್ತು ಸ್ವದೇಶಿ ಆರ್ಥಿಕತೆಯ ಬಲವರ್ಧನೆ ಮಾಡಲು ಈ ಜಾಥಾ ಸಹಾಯಕವಾಗಲಿದೆ. ಇದರಲ್ಲಿ ನಿವೃತ್ತ ಯೋಧರು, ಮಹಿಳೆಯರು, ವಿದ್ಯಾರ್ಥಿಗಳು, ಹಾಗೂ ವಿವಿಧ ಕ್ಷೇತ್ರಗಳ ಯುವಕರು ಸಹ ಭಾಗವಹಿಸಲಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನು ಸಂಪರ್ಕಿಸಿ, ಸ್ವದೇಶಿ ಉತ್ಪಾದನೆ, ಕಲೆಗಾರಿಕೆ, ಕೃಷಿ–ಕೈಗಾರಿಕೆ ಮತ್ತು ಸ್ಥಳೀಯ ಉದ್ಯಮಗಳಿಗೆ ಬೆಂಬಲದ ಸಂದೇಶವನ್ನು ತಲುಪಿಸಲಿದ್ದಾರೆ. ಡಿ. 13ರಂದು ಬೆಂಗಳೂರು ಹೊರವಲಯದ ಅರ್ಜುನ್ ಬೆಟ್ಟಹಳ್ಳಿಯಿಂದ ಜಾಥಾಕ್ಕೆ ಚಾಲನೆ ನೀಡಲಾಗುತ್ತದೆ’ ಎಂದರು.
ಬೆಂಗಳೂರು: ‘ಕನ್ನಡ ಎಂಬುದು ಕೇವಲ ಒಂದು ಭಾಷೆಯಲ್ಲ ಅದು ನಮ್ಮ ನಡೆ ನುಡಿಗಳನ್ನು ಸೊಗಸಾಗಿಸುವ ಆತ್ಮಶಕ್ತಿ’ ಎಂದು ಸಾಹಿತಿ ರಹಮತ್ ತರೀಕೆರೆ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕುವೆಂಪು, ಪಂಪ, ರನ್ನ ಹಾಗೂ ಕಾರಂತರ ಕಾವ್ಯದಿಂದ, ಬಸವಣ್ಣ ಮತ್ತು ಅಕ್ಕಮಹಾದೇವಿ ವಚನಗಳಿಂದ, ಬೇಂದ್ರೆ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಚಿಂತನೆಗಳಿಂದ ಕನ್ನಡವು ಇನ್ನೂ ನಮ್ಮೊಳಗೆ ಜೀವಂತವಾಗಿದೆ. ಕರ್ನಾಟಕ ರಾಜ್ಯೋತ್ಸವ ಕೇವಲ ಆಚರಣೆ ಅಲ್ಲ, ಇದು ವೈವಿಧ್ಯದಲ್ಲಿ ಏಕತೆ ಎಂಬ ನಂಬಿಕೆಗೆ ಸಾಕ್ಷಿ. ಹಲವಾರು ಜಾತಿ, ಧರ್ಮ, ಅಭಿರುಚಿ ಹಾಗೂ ಆಚರಣೆಗಳು ಇದ್ದರೂ ಈ ನಾಡಿನ ಮೇಲೆ ಇರುವ ಪ್ರೀತಿ ನಮ್ಮಲ್ಲರನ್ನು ಒಗ್ಗೂಡಿಸುತ್ತದೆ’ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಮಾತನಾಡಿ, ‘ಕನ್ನಡ ಎಂದರೆ ಆತ್ಮಾಭಿಮಾನದ ಸಂಕೇತವಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಿರಂತರವಾಗಿ ಕನ್ನಡ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ಕಡ್ಡಾಯವಾಗಿ ನೀಡಬೇಕು. ಕನ್ನಡ ಅಭಿವೃದ್ಧಿ ಕೇವಲ ವಿಶ್ವವಿದ್ಯಾಲಯಗಳಿಗೆ ಸೀಮಿತವಾಗದೇ ರಾಜ್ಯದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಕನ್ನಡ ಭಾಷೆಯ ಬಗ್ಗೆ ಇರುವ ಕೀಳರಿಮೆಯನ್ನು ಬಿಟ್ಟು ಮಕ್ಕಳನ್ನು ಕನ್ನಡದಲ್ಲಿಯೇ ಮಾತನಾಡುವಂತೆ ಪ್ರೆರೇಪಿಸಬೇಕು’ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಪೋಟಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.