ಯಲಹಂಕ: ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ಸಮಯಕ್ಕೆ ಸರಿಯಾಗಿ ದಿನಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವುದು ಸುಲಭದ ಕಾರ್ಯವಲ್ಲ. ಇಂತಹ ಸವಾಲಿನ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ಮಿನಿ ವಿಧಾನಸೌಧದ ಸಮೀಪದಲ್ಲಿ ನೂತನವಾಗಿ ನಿರ್ಮಿಸಿರುವ ಯಲಹಂಕ ದಿನಪತ್ರಿಕೆ ವಿತರಕರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ 12ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಈ ಭಾಗದ ಪತ್ರಕರ್ತರಿಗೆ ಉಚಿತ ಆರೋಗ್ಯ ಶಿಬಿರ ಆಯೋಜಿಸುವುದರ ಜೊತೆಗೆ ಸೈಕಲ್ ಮತ್ತು ನಿವೇಶನ ವಿತರಣೆ ಸೇರಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ದಿನಪತ್ರಿಕೆ ವಿತರಕರು ಖಾಸಗಿ ಜಾಗಗಳಲ್ಲಿ ಪತ್ರಿಕೆಗಳನ್ನು ವಿಂಗಡಿಸಿ ವಿತರಿಸಬೇಕಿತ್ತು. ಅದರಲ್ಲೂ ಮಳೆ ಬಂದ ಸಂದರ್ಭಗಳಲ್ಲಿ ಹೆಚ್ಚಿನ ಸಮಸ್ಯೆಯಾಗುತ್ತಿತ್ತು. ಸಂಘದ ಪದಾಧಿಕಾರಿಗಳ ಮನವಿಯ ಮೇರೆಗೆ ಕಚೇರಿ ನಿರ್ಮಿಸಲಾಗಿದೆ. ಇದರಿಂದ ಪತ್ರಿಕೆಗಳ ವಿಂಗಡಣೆ ಕಾರ್ಯದ ಜೊತೆಗೆ ಸಭೆ-ಸಮಾರಂಭಗಳನ್ನು ಆಯೋಜಿಸಲು ಅನುಕೂಲವಾಗಲಿದೆ ಎಂದರು.
ಇದೇ ವೇಳೆ ಹಿರಿಯ ಪತ್ರಿಕಾ ವಿತರಕರು ಹಾಗೂ ಹಲವು ಮುಖಂಡರನ್ನು ಸನ್ಮಾನಿಸಲಾಯಿತು. ಪತ್ರಿಕಾ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ವೀರಶೈವ ಮಹಾಸಭಾದ ಯಲಹಂಕ ಘಟಕದ ಅಧ್ಯಕ್ಷೆ ಹೇಮಲತ ಚಿದಾನಂದ, ಯಶೋದಾ ಸತೀಶ್, ಸಂಘದ ಉಪಾಧ್ಯಕ್ಷ ಪಿ.ಕೆ.ಎಸ್.ಶಂಕರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶಮೂರ್ತಿ, ಖಜಾಂಚಿ ವೈ.ಸಿ.ವೀರಭದ್ರ, ಸಹ ಕಾರ್ಯದರ್ಶಿ ಪ್ರದೀಪ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.