ADVERTISEMENT

ಸರ್ಕಾರದ ನಿರ್ಧಾರ ಆಧರಿಸಿ ಮುಂದಿನ ಹೆಜ್ಜೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 6:39 IST
Last Updated 27 ನವೆಂಬರ್ 2020, 6:39 IST

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 2-ಎ ಪಟ್ಟಿಗೆ ಮತ್ತು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರದ ನಡೆ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದ ಚಿತ್ರಕಲಾ‌ ಪರಿಷತ್ ನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ಎರಡು ದಿನಗಳೊಳಗೆ ಒಳ್ಳೆಯ ಸುದ್ದಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದರು. ಶುಕ್ರವಾರದ ಸಂಪುಟ ಸಭೆಯಲ್ಲೇ ನಿರ್ಧಾರ ಕೈಗೊಳ್ಳುವ ನಂಬಿಕೆ ಇತ್ತು. ಸಂಪುಟ ಸಭೆಯ ತೀರ್ಮಾನ ಆಧರಿಸಿ ನಾವು ಮುಂದಿನ ಹೆಜ್ಜೆ ಇಡುತ್ತೇವೆ' ಎಂದರು.

'ನಮ್ಮ ಬೇಡಿಕೆ ಕುರಿತು ಶುಕ್ರವಾರದ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಉಲ್ಲೇಖವಿದೆ. ಆದರೆ, ಈ ಬಗ್ಗೆ ಚರ್ಚೆ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿಕೆ‌ ನೀಡಿರುವುದು ಮಾಧ್ಯಮಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಸಂಪುಟ‌ ಸಭೆಯ ನಿರ್ಧಾರವನ್ನು ಕಾದು ನೋಡುತ್ತೇವೆ' ಎಂದರು.

ADVERTISEMENT

ಈ ಬಾರಿ ಆಗದಿದ್ದರೆ ಮುಂದಿನ ಸಂಪುಟ ಸಭೆಯಲ್ಲಾದರೂ ತಮ್ಮ ಬೇಡಿಕೆ ಕುರಿತು ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಕೇಂದ್ರಕ್ಕೆ ಶಿಫಾರಸು ಕಳಿಸುವ ಮೊದಲು ರಾಜ್ಯ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ತಜ್ಞರನ್ನು ಒಳಗೊಂಡ ಆಯೋಗದಿಂದ ವರದಿ ಪಡೆದು ಕಳುಹಿಸಿದರೆ ಉತ್ತಮ ಎಂದರು.

ಬಸವಣ್ಣನ ಹೆಸರಿಡಲು ಒತ್ತಾಯ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಸ್ವಾಗತಾರ್ಹ ಬೆಳವಣಿಗೆ. ನಿಗಮಕ್ಕೆ ಸಮುದಾಯದ ಹೆಸರಿನ ಬದಲು ಬಸವಣ್ಣನವರ ಹೆಸರಿಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.