
ಬೆಂಗಳೂರು: ನೈಸ್ ರಸ್ತೆಯ ವರಹಾಸಂದ್ರ ಸೇತುವೆ ಬಳಿ ಶನಿವಾರ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ದೇವರಾಜ್ (32) ಮತ್ತು ಅಶೋಕ್ (23) ಮೃತರು.
ಲಗ್ಗೆರೆಯಲ್ಲಿ ವಾಸವಾಗಿದ್ದ ಇಬ್ಬರೂ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತರಾದ ಶ್ರೀನಿವಾಸ್, ಮದನ್, ಮಹಾಂತೇಶ್ ಅವರ ಜತೆ ಕಾರಿನಲ್ಲಿ ನೆಲಮಂಗಲಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.
ದೇವರಾಜ್ ಅತಿ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದರು. ನಿಯಂತ್ರಣ ತಪ್ಪಿ ರಸ್ತೆ ಬದಿಯ ಬ್ಯಾರಿಕೇಡ್‍ಗೆ ವಾಹನ ಡಿಕ್ಕಿ ಹೊಡೆದಿದೆ. ನಂತರ ಅವರ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಐದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ದೇವರಾಜ್ ಮತ್ತು ಅಶೋಕ್, ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಹೇಳಿದರು.
ಶ್ರೀನಿವಾಸ್, ಮದನ್ ಮತ್ತು ಮಹಾಂತೇಶ್, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದೆ ಎಂದು ಮಾಹಿತಿ ನೀಡಿದರು.