ADVERTISEMENT

ರಾತ್ರಿ ವಾಣಿಜ್ಯ ವಹಿವಾಟು ಓಕೆ: ಮೂಲ ಸೌಕರ್ಯ ಬೇಕು

ಎಲ್ಲ ಚಟುವಟಿಕೆ 24X7 ನಡೆಯಲಿ: ತಜ್ಞರ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 21:43 IST
Last Updated 4 ಜನವರಿ 2021, 21:43 IST
ಶಾಪಿಂಗ್
ಶಾಪಿಂಗ್   

ಬೆಂಗಳೂರು: ರಾಜ್ಯದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ವಾಣಿಜ್ಯ ಮಳಿಗೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಇದು ಇಂತಿಷ್ಟೇ ವಲಯಕ್ಕೆ ಸೀಮಿತವಾಗದೆ ಹಗಲು–ರಾತ್ರಿಗೆ ವ್ಯತ್ಯಾಸ ಇಲ್ಲದಂತೆ ಎಲ್ಲ ವಹಿವಾಟು ಆರಂಭವಾಗಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಇಡೀ ರಾತ್ರಿ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಿರುವ ಸರ್ಕಾರ, ಕಾರ್ಮಿಕರ ಕೆಲಸದ ಅವಧಿ ವಾರಕ್ಕೆ 48 ಗಂಟೆ ಮೀರಬಾರದು ಎಂಬುದೂ ಸೇರಿ ಹಲವು ಷರತ್ತುಗಳನ್ನು ವಿಧಿಸಿದೆ. ಸರ್ಕಾರದ ಈ ನಿರ್ಧಾರವನ್ನು ವಾಣಿಜ್ಯೋದ್ಯಮಿಗಳು, ಹೋಟೆಲ್‌ ಉದ್ಯಮಿಗಳು ಸ್ವಾಗತಿಸಿದ್ದಾರೆ. ಈ ಕ್ರಮದಿಂದ ಆರ್ಥಿಕ ಚಟುವಟಿಕೆಗೆ ಉತ್ತೇಜನ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೊರದೇಶಗಳಲ್ಲಿನ ದೊಡ್ಡ ದೊಡ್ಡ ನಗರಗಳಲ್ಲಿ ಇರುವ ಮಾದರಿಯಲ್ಲಿ ಹಗಲು ಮತ್ತು ರಾತ್ರಿಗೆ ವ್ಯತ್ಯಾಸ ಇಲ್ಲದ ರೀತಿಯ ವ್ಯಾಪಾರ ವಹಿವಾಟು ಬೆಂಗಳೂರಿನಲ್ಲೂ ಇರಬೇಕು. ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಶಾಪಿಂಗ್ ಮಾಡಲು ಅವಕಾಶ ಇರಬೇಕು. ಶಾಪಿಂಗ್ ಮಾಲ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ಗೂಡಂಗಡಿಗಳೂ ತೆರೆದುಕೊಳ್ಳಬೇಕು. ಆಗ ಸಿಲಿಕಾನ್ ಸಿಟಿಯ ಚಿತ್ರಣ ಮತ್ತೊಂದು ಮಗ್ಗಲಿಗೆ ಹೊರಳಿದಂತೆ ಆಗಲಿದೆ. ಉದ್ಯೋಗಾವಕಾಶವೂ ಹೆಚ್ಚಾಗಲಿದೆ ಎನ್ನುತ್ತಾರೆ ತಜ್ಞರು.

ADVERTISEMENT

‘ರಾತ್ರಿ ವಹಿವಾಟು ಆರಂಭಿಸಲು ಸರ್ಕಾರ ಅನುಮತಿ ನೀಡಿ ಸುಮ್ಮನಾದರೆ ಸಾಲದು, ಅದಕ್ಕೆ ಬೇಕಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ರಾತ್ರಿ ಶಾಪಿಂಗ್ ಮುಗಿಸಿ ಮನೆಗೆ ಹೋಗಲು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಲಭ್ಯವಿರಬೇಕು, ಭಯವಿಲ್ಲದೆ ಸಂಚರಿಸಲು ಪೊಲೀಸ್ ಭದ್ರತಾ ವ್ಯವಸ್ಥೆ ಇರಬೇಕು’ ಎನ್ನುತ್ತಾರೆ.

’ಶೇ 30ರಷ್ಟು ಹೆಚ್ಚುವರಿ ಉದ್ಯೋಗ ಸೃಷ್ಟಿ‘

ದಿನದ 24 ಗಂಟೆಯೂ ವಾಣಿಜ್ಯ ವಹಿವಾಟು ಆರಂಭವಾದರೆ ಶೇ 30ರಷ್ಟು ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಎಫ್‌ಕೆಸಿಸಿಐ ಅಂದಾಜಿಸಿದೆ.

‘ತಡರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವವರು ಶಾಂಪಿಂಗ್ ಮುಗಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಈ ರೀತಿಯ ವ್ಯವಸ್ಥೆ ಹೊರದೇಶಗಳಲ್ಲಿ ಈಗಾಗಲೇ ಇದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕ್ಕಲ್‌ ಎಂ. ಸುಂದರ್‌ ಹೇಳಿದರು.

‘ಈ ವ್ಯವಸ್ಥೆ ಜಾರಿಗೆ ತರಬೇಕು ಎಂದು ಹಲವು ವರ್ಷಗಳಿಂದ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೆವು. ರಾಜ್ಯದ ಆರ್ಥಿಕ ಸ್ಥಿತಿಯೂ ಇದರಿಂದ ಸುಧಾರಿಸಲಿದೆ.ಈ ಹೊಸ ವ್ಯವಸ್ಥೆಗೆ ಜನ ಒಗ್ಗಿಕೊಳ್ಳಲು ಸಮಯ ಬೇಕಾಗುತ್ತದೆ. ಅದಕ್ಕೆ ಸರ್ಕಾರ ಅವಕಾಶ ನೀಡಬೇಕು’ ಎಂದು ತಿಳಿಸಿದರು.

ಶಾಪಿಂಗ್‌ಗೆ ಬರುವ ಜನರಿಗೆ ಸಾರಿಗೆ ವ್ಯವಸ್ಥೆ ಲಭ್ಯವಿರಬೇಕು. ಕ್ಯಾಬ್ ಮತ್ತು ಆಟೋರಿಕ್ಷಾ ಚಾಲಕರಿಗೂ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಗಸ್ತು ಮತ್ತಷ್ಟು ಹೆಚ್ಚು

ವಾಣಿಜ್ಯ ಮಳಿಗೆ ಹಾಗೂ ಕೆಲ ಅಂಗಡಿಗಳನ್ನು 24 ಗಂಟೆಯೂ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಇದರಿಂದಾಗಿ ನಗರದಲ್ಲಿ ಪೊಲೀಸರ ಗಸ್ತಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.

ನಗರದಲ್ಲಿ ಅಪರಾಧಗಳ ಸಂಖ್ಯೆಯೂ ಹೆಚ್ಚಾಗಿದ್ದು, ಗಣ್ಯ ಹಾಗೂ ಅತೀ ಗಣ್ಯ ವ್ಯಕ್ತಿಗಳ ಸಂಚಾರವೂ ಜಾಸ್ತಿ ಇದೆ. ಅಪರಾಧ ಪ್ರಕರಣ ಭೇದಿಸುತ್ತಲೇ, ಎಲ್ಲರಿಗೂ ರಕ್ಷಣೆ ನೀಡಬೇಕಾದ ಜವಾಬ್ದಾರಿ ಪೊಲೀಸರ ಮೇಲಿದೆ. ಸಿಬ್ಬಂದಿ ಕೊರತೆ ನಡುವೆ ಒತ್ತಡದ ಸ್ಥಿತಿಯಲ್ಲೇ ಪೊಲೀಸರು ಕೆಲಸ ಮಾಡುತ್ತಿದ್ದಾರೆ.

ಇದೀಗ ಗಸ್ತು ವ್ಯವಸ್ಥೆಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಪೊಲೀಸರು ಮಾಡಿಕೊಂಡಿದ್ದಾರೆ. 24 ಗಂಟೆಯೂ ತೆರೆದಿರುವ ವಾಣಿಜ್ಯ ಮಳಿಗೆ ಹಾಗೂ ಕೆಲ ಅಂಗಡಿಗಳಿಗೆ ಸೂಕ್ತ ರಕ್ಷಣೆ ನೀಡಲು ಕ್ರಮ ಕೈಗೊಂಡಿದ್ದಾರೆ.

’24 ಗಂಟೆಯೂ ತೆರೆದಿರಲಿರುವ ಮಳಿಗೆ ಹಾಗೂ ಅಂಗಡಿಗಳ ಪಟ್ಟಿ ಮಾಡಲಾಗುತ್ತಿದೆ. ಅಲ್ಲೆಲ್ಲ ಪರಿಶೀಲನಾ ಪುಸ್ತಕಗಳನ್ನು ಇರಿಸಲಾಗುವುದು. ನಿಗದಿತ ಗಸ್ತು ಸಿಬ್ಬಂದಿ, ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಬರಲಿದ್ದಾರೆ. ಜೊತೆಗೆ, ಹೊಯ್ಸಳ ಗಸ್ತು ವಾಹನಗಳು ದಿನದ 24 ಗಂಟೆಯೂ ಸಂಚರಿಸಲಿವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಮೊದಲಿನಿಂದಲೂ ಇದೆ. ಪ್ರತಿ ಠಾಣೆಯಲ್ಲೂ ಕೆಲವರು ಮಾತ್ರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಎಲ್ಲರನ್ನೂ ಸರದಿ ಪ್ರಕಾರ ಗಸ್ತಿಗೆ ಕಳುಹಿಸಲಾಗುತ್ತಿದೆ. ಎಲ್ಲೇ ಅಹಿತಕರ ಘಟನೆಗಳು ನಡೆದರೆ ತುರ್ತಾಗಿ ಸ್ಪಂದಿಸಲಾಗುವುದು. ಭದ್ರತೆ ಸಂಬಂಧ ಆಯಾ ಠಾಣೆ ಇನ್‌ಸ್ಪೆಕ್ಟರ್‌ಗಳಿಗೆ ಈಗಾಗಲೇ ಕೆಲ ಸೂಚನೆ ನೀಡಲಾಗಿದೆ’ ಎಂದರು.

‘ಅಂಗಡಿಯಲ್ಲಿ ಕೆಲಸ ಮಾಡುವ ಹಾಗೂ ಅಂಗಡಿಗೆ ಬಂದು ಹೋಗುವ ಮಹಿಳೆಯರ ಸುರಕ್ಷತೆಗೂ ಒತ್ತು ನೀಡಲಾಗಿದೆ. ಅಂಗಡಿಗಳಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಬಂದು ಹೋಗುವವರ ಬಗ್ಗೆ ನಿಗಾ ಇರಿಸುವಂತೆಯೂ ತಿಳಿಸಲಾಗಿದೆ’ ಎಂದೂ ತಿಳಿಸಿದರು.

’ಹಸಿದವರಿಗೆ ಅನ್ನ ಸಿಗಲಿದೆ‘

‘ರಾತ್ರಿ 11ರ ನಂತರ ಹೋಟೆಲ್‌ಗಳನ್ನು ಪೊಲೀಸರು ಬಂದ್ ಮಾಡಿಸುತ್ತಿದ್ದ ಕಾರಣ ರಾತ್ರಿ ವೇಳೆ ಪ್ರಯಾಣ ಮಾಡಿಕೊಂಡು ಬಂದಿಳಿದವರು ಊಟಕ್ಕೆ ಪರದಾಡುವ ಸ್ಥಿತಿ ಇತ್ತು. ಈ ಹೊಸ ವ್ಯವಸ್ಥೆಯಿಂದ ಅವರ ಹಸಿವು ನೀಗಲಿದೆ’ ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಹೇಳಿದರು.

‘ಕಳ್ಳತನ, ದರೋಡೆ, ಸುಲಿಗೆ ಆಗದಂತೆ ತಡೆಯಲು ಪೊಲೀಸ್ ಗಸ್ತು ವ್ಯವಸ್ಥೆ ಹೆಚ್ಚಾಗಬೇಕು. ಜನರು ಮನೆಗೆ ಸುರಕ್ಷಿತವಾಗಿ ತಲುಪಲು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರಬೇಕು. ಬಿಎಂಟಿಸಿ ಬಸ್ ಮತ್ತು ಮೆಟ್ರೊ ರೈಲು ಸಂಚಾರ ಇಡೀ ರಾತ್ರಿ ಇದ್ದರೆ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

‘ಕಾರ್ಮಿಕರನ್ನು ಪಾಳಿ ಪದ್ಧತಿಯಲ್ಲಿ ಕೆಲಸಕ್ಕೆ ನಿಯೋಜಿಸಬೇಕಾಗುತ್ತದೆ. ಹೀಗಾಗಿ, ಉದ್ಯೋಗ ಸೃಷ್ಟಿಯೂ ಆಗಲಿದೆ’ ಎಂದು ಹೇಳಿದರು.

* ಬಿಎಂಟಿಸಿ ಬಸ್ ಸೇವೆ ಇಡೀ ರಾತ್ರಿ ಬೇಕು ಎಂಬ ಬೇಡಿಕೆ ಸದ್ಯಕ್ಕೆ ಬಂದಿಲ್ಲ. ಬೇಡಿಕೆ ಬಂದರೆ ಪರಿಶೀಲಿಸಲಾಗುವುದು.

– ಸಿ.ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ

* ವಸತಿ ಬಡಾವಣೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಆಗದಂತೆ, ಸಂಚಾರ ದಟ್ಟಣೆಗೆ ಅವಕಾಶ ಇಲ್ಲದಂತೆ ವಾಣಿಜ್ಯ ವಹಿವಾಟು ನಡೆಯುವಂತೆ ಸರ್ಕಾರ ನೋಡಿಕೊಳ್ಳಬೇಕು.

– ಶ್ರೀಕಾಂತ್ ನರಸಿಂಹನ್, ಬೆಂಗಳೂರು ನವನಿರ್ಮಾಣ ಪಕ್ಷ

* ಬಾರ್,ರೆಸ್ಟೋರೆಂಟ್‌ಗಳು ಇಡೀ ರಾತ್ರಿ ಕಾರ್ಯನಿರ್ವಹಿ ಸಲು ಅನುಮತಿ ಇಲ್ಲ. ಅವಕಾಶ ಬೇಕು ಎಂದು ನಾವೂ ಕೇಳಿಲ್ಲ. ಸದ್ಯ ಇರುವ ಸಮಯವೇ ಸಾಕು.

–ಲೋಕೇಶ್, ಬೆಂಗಳೂರು ನಗರ ಜಿಲ್ಲೆ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.