ADVERTISEMENT

ನಿಮ್ಹಾನ್ಸ್: ಅಂಗಾಂಗ ಚಲನೆ ಅಸ್ವಸ್ಥತೆಗೆ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 6:41 IST
Last Updated 20 ನವೆಂಬರ್ 2022, 6:41 IST
   

ಬೆಂಗಳೂರು:ನಿಮ್ಹಾನ್ಸ್ ಸಂಸ್ಥೆಯು ಅಂಗಾಂಗ ಚಲನೆಯ ಅಸ್ವಸ್ಥತೆ ಬಗ್ಗೆ ತನ್ನ ಕೇಂದ್ರದಲ್ಲಿ ಇದೇ 23ರಿಂದ ಜಾಗೃತಿ ಸಪ್ತಾಹ ಹಮ್ಮಿಕೊಂಡಿದ್ದು, ವೈದ್ಯರ ಜತೆಗೆ ನೇರ ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗಿದೆ.

ಪಾರ್ಕಿನ್‌ಸನ್‌,ಹಂಟಿಂಗ್‌ಟನ್‌ ಸೇರಿ ವ್ಯಕ್ತಿಯ ಚಲನಶೀಲತೆ, ಬೌದ್ಧಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಕುಂದಿಸುವ ಕಾಯಿಲೆಗಳುಅಂಗಾಂಗ ಚಲನೆ ಅಸ್ವಸ್ಥತೆ ರೋಗಗಳ ಅಡಿಯಲ್ಲಿ ಬರಲಿವೆ. ಈ ಕಾಯಿಲೆಗಳನ್ನು ಎದುರಿಸುತ್ತಿರುವವರಿಗೆ ಅಂಗಾಂಗಗಳನ್ನು ತಿರುಗಿಸಲು ಕಷ್ಟವಾಗುತ್ತದೆ. ಸ್ನಾಯುಗಳು ಹಿಡಿದುಕೊಳ್ಳುವುದು, ಕಣ್ಣುಗಳ ಚಲನೆ ನಿಧಾನವಾಗುವುದು, ಸಮತೋಲನ ತಪ್ಪುವುದು, ಮಾತನಾಡಲು ಹಾಗೂ ಆಹಾರ ನುಂಗಲು ಕಷ್ಟವಾಗುವುದು, ನಿಯಂತ್ರಣವಿಲ್ಲದೇ ಕೈ ಮತ್ತು ಕಾಲುಗಳು ಅಲುಗಾಡುವುದು ಸೇರಿ ವಿವಿಧ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಸಂಸ್ಥೆ ಹೇಳಿದೆ.

ನ.23ರಿಂದ ನ.25ರವರೆಗೆ ಸಂಸ್ಥೆಯ ಹೊರರೋಗಿ ವಿಭಾಗದಲ್ಲಿ ರೋಗಿಗಳು ಹಾಗೂ ಅವರ ಸಹಾಯಕರಿಗೆಅಂಗಾಂಗ ಚಲನೆಯ ಅಸ್ವಸ್ಥತೆ ಮತ್ತು ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಕಾಯಿಲೆಯ ಬಗ್ಗೆ ಸಂವಾದವನ್ನೂ ನಡೆಸಲಾಗುವುದು. ನ.26ರಂದು ಸಂಸ್ಥೆಯ ಅಶ್ವಿನಿ ಹಾಲ್‌ನಲ್ಲಿ ಬೆಳಿಗ್ಗೆ 10ರಿಂದ ತಜ್ಞ ಮನೋವೈದ್ಯರ ಜತೆಗೆ ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.