
ಬೆಂಗಳೂರು: ನಿರಂಜನ ಅವರು ಎಚ್ಚರಿಸಿದ್ದ ಮತ ಭ್ರಾಂತಿ ಮತ್ತು ಮತಿ ಭ್ರಾಂತಿ ಇಂದಿಗೂ ಪ್ರಸ್ತುತ. ಇಂದಿಗೂ ಎಲ್ಲ ಫ್ಯಾಸಿಸ್ಟ್‌ಗಳಲ್ಲಿ ಈ ಎರಡು ಭ್ರಾಂತಿಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ ಎಂದು ವಿಮರ್ಶಕ ರಾಜೇಂದ್ರ ಚೆನ್ನಿ ಹೇಳಿದರು.
ಕ್ರಿಯಾ ಮಾಧ್ಯಮ ಮತ್ತು ಜನಶಿಕ್ಷಣ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ನಿರಂಜನ ಶತಮಾನ ಸಮಾರೋಪ ವಿಚಾರಸಂಕಿರಣ ಮತ್ತು ನಿರಂಜನ ಮರು ಓದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೇಖಕನು ಒಂದು ಪಕ್ಷಕ್ಕೆ, ಸಿದ್ಧಾಂತಕ್ಕೆ ಬದ್ಧನಾಗಿದ್ದರೆ ಸೃಜನಶೀಲತೆ ಬತ್ತಿಹೋಗುತ್ತದೆ. ಬದುಕಿಗೆ ಬದ್ಧನಾಗಿದ್ದರೆ, ಅದಕ್ಕೆ ರಾಜಕೀಯ ಪಕ್ಷ ಪೂರಕವಾಗಿದ್ದರೆ ಅದು ಬೇರೆ. ಆದರೆ, ಅದಕ್ಕಾಗಿ ಸೃಜನಶೀಲತೆಯನ್ನು ಬಿಟ್ಟುಕೊಡಬಾರದು ಎಂಬುದು ನಿರಂಜನ ಅವರ ನಿಲುವು ಆಗಿತ್ತು ಎಂದು ವಿವರಿಸಿದರು.
ಸಮಾಜದ ರಚನೆಗಳ ಬಗ್ಗೆ ಹೆಚ್ಚು ಗಮನ ಕೊಡದೆ, ಸಡಿಲವಾಗಿ ಮನುಷ್ಯ ಪರವಾಗಿ ಇರುವ ಉದಾರವಾದಿ ಮಾನವೀಯತೆ ನಮ್ಮ ಸಾಹಿತ್ಯ ಪರಂಪರೆಯಲ್ಲಿ ಮುಂದುವರಿದುಕೊಂಡು ಬಂದಿದೆ. ಅದರ ಬದಲು ಸಮಾಜದ ಸಂರಚನೆಯ ಒಳಗೆ ಆಳವಾಗಿ ಬೇರೂರಿರುವ ವಿಚಾರಗಳ ಬಗ್ಗೆ ತಿಳಿದುಕೊಂಡು ಬದ್ಧರಾಗುವುದು ಮುಖ್ಯ ಎಂದು ನಿರಂಜನ ಪ್ರತಿಪಾದಿಸಿದ್ದರು ಎಂದರು.
ಮಹಿಳೆಯರನ್ನು ಶೋಷಿತರನ್ನಾಗಿ ನೋಡುವುದೇ ಒಂದು ಅಪರಾಧ. ಶೋಷಿತರ ಬದಲಾಗಿ ಅವರನ್ನು ಶೋಧನೆಯ ಒಳನೋಟಗಳಿಂದ ನೋಡಬೇಕು ಎಂಬುವುದನ್ನು ನಿರಂಜನ ಅವರ ಬರಹಗಳು ಕಟ್ಟಿಕೊಡುತ್ತವೆ. ಅವರನ್ನು ಪ್ರಗತಿಶೀಲ ಪಂಥದ ಪ್ರತಿನಿಧಿ ಎಂದು ಚೌಕಟ್ಟು ಹಾಕಿ ಅದರೊಳಗೆ ಇರಿಸಿ ನೋಡಲು ಹೋದರೆ ಕೆಲವು ಸೂಕ್ಷ್ಮಗಳು ತಪ್ಪಿ ಹೋಗುತ್ತವೆ ಎಂದು ವಿಮರ್ಶಿಸಿದರು.
‘ದ್ವೇಷ ಭಾಷಣ ಮಾಡಿದಾಗ ನ್ಯಾಯಾಲಯ ಕ್ರಮ ಕೈಗೊಳ್ಳುತ್ತದೆ ಎಂದು ಭಾವಿಸಿದ್ದೆವು. ಆದರೆ ಅಂಥವರ ಮೇಲೆ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಪದೇ ಪದೇ ಹೇಳುವ ಕಾಲಘಟ್ಟದಲ್ಲಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ನಿರಂಜನ ಅವರ ಸಾಹಿತ್ಯದಲ್ಲಿ ಮಹಿಳೆ’ ಕುರಿತು ಮಾತನಾಡಿದ ಲೇಖಕಿ ಎಚ್. ಗಾಯತ್ರಿ, ‘ನಿರಂಜನ ಬರಹಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವ ನೀಡಲಾಗಿದೆ. ವಿಧವೆಯ ಸಂಕೋಲೆಯಿಂದ ಹೊರಬರುವುದರ ಬಗ್ಗೆ ಅವರ ಸಾಹಿತ್ಯ ಒತ್ತಿಹೇಳುತ್ತದೆ. ಪುರುಷರ ಕ್ರೌರ್ಯವನ್ನು ತೆರೆದಿಡುತ್ತದೆ’ ಎಂದು ಹೇಳಿದರು.
ಎಂ.ಜಿ. ಹೆಗಡೆ, ತೇಜಸ್ವಿನಿ ನಿರಂಜನ ಅವರು ನಿರಂಜನರ ವಿಚಾರಗಳ ಬಗ್ಗೆ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.