ADVERTISEMENT

ನಿತ್ಯಾನಂದ ವಿರುದ್ಧದ ವಾರಂಟ್‌ ರದ್ದುಗೊಳಿಸಿದ ಹೈಕೋರ್ಟ್

ರಂಜಿತಾ ಮೆನನ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 19:22 IST
Last Updated 16 ಜನವರಿ 2019, 19:22 IST
ನಿತ್ಯಾನಂದ ಸ್ವಾಮಿ
ನಿತ್ಯಾನಂದ ಸ್ವಾಮಿ   

ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿಯ ನಿತ್ಯಾನಂದಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ರಾಮನಗರದ ಜಿಲ್ಲಾ ನ್ಯಾಯಾಲಯ ಕಳೆದ ವರ್ಷ ಸೆಪ್ಟೆಂಬರ್‌ 6ರಂದು ಹೊರಡಿಸಿದ್ದ ಜಾಮೀನು ರಹಿತ ವಾರಂಟ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

ನಿತ್ಯಾನಂದ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್‌ ಅವರಿದ್ದ ಏಕಸದಸ್ಯ ಪೀಠ ಬುಧವಾರ ಪ್ರಕಟಿಸಿದೆ.

‘ಅಧೀನ ನ್ಯಾಯಾಲಯ, ಅರ್ಜಿ ತಿರಸ್ಕರಿಸಿರುವುದಕ್ಕೆ ಸೂಕ್ತ ಕಾರಣ ನೀಡಿಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಆದೇಶಿಸಬಹುದು’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಪ್ರಕರಣದ ಮತ್ತೊಬ್ಬ ಆರೋಪಿ ಸಿವವಲ್ಲಭನೇನಿ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್ ಅನ್ನೂ ನ್ಯಾಯಪೀಠ ಇದೇ ವೇಳೆ ರದ್ದುಪಡಿಸಿದೆ.

ರಂಜಿತಾ ಅರ್ಜಿ ವಜಾ: ‘ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಸಹಾಯ ನೀಡಲು ನನಗೆ ಅವಕಾಶ ಮಾಡಿಕೊಡಬೇಕು’ ಎಂದು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಆದೇಶ ಪ್ರಶ್ನಿಸಿ ರಂಜಿತಾ ಮೆನನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ಇದೇ ವೇಳೆ ವಜಾಗೊಳಿಸಿದೆ.

‘ಆಕೆ ಸ್ವಯಂ ಹೇಳಿಕೆ ಪ್ರಕಾರ ಸಂತ್ರಸ್ತೆಯಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯ ಅವರ ಅರ್ಜಿ ತಿರಸ್ಕರಿಸಿರುವುದು ಸರಿಯಾಗಿದೆ’ ಎಂದು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಆದೇಶದಲ್ಲಿ ವಿವರಿಸಿದ್ದಾರೆ.

ರದ್ದು: ಪ್ರಕರಣದ ದಾಖಲೆಗಳನ್ನು ತಮಿಳಿನಿಂದ ಕನ್ನಡಕ್ಕೆ ಅಥವಾ ಇಂಗ್ಲಿಷ್‌ಗೆ ಅನುವಾದ ಮಾಡಲು ಸಹಾಯಕ ಪ್ರಾಧ್ಯಾಪಕ ಬಸವರಾಜ್ ಅವರನ್ನು ನೇಮಕ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನೂ ನ್ಯಾಯಪೀಠ ರದ್ದುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.