ADVERTISEMENT

‘ಬೆಳೆ ರಕ್ಷಣೆ: ತಾಂತ್ರಿಕ ನೆರವು ಅಗತ್ಯ’

ಕೇಂದ್ರೀಯ ವಿವಿ ಸಹ ಕುಲಪತಿ ಪ್ರೊ.ಎನ್‌.ಆರ್. ಶೆಟ್ಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 20:29 IST
Last Updated 19 ಡಿಸೆಂಬರ್ 2019, 20:29 IST
ಪ್ರದರ್ಶನದಲ್ಲಿ ಪ್ರೊ.ಎನ್‌.ಆರ್.ಶೆಟ್ಟಿ ಅವರು ಮಾದರಿಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಡಾ.ಎಚ್.ಸಿ.ನಾಗರಾಜ್, ಡಾ.ವಿ.ಶ್ರೀಧರ್, ಡಾ.ಎನ್.ಎಚ್.ಪ್ರಸಾದ್ ಇದ್ದಾರೆ.
ಪ್ರದರ್ಶನದಲ್ಲಿ ಪ್ರೊ.ಎನ್‌.ಆರ್.ಶೆಟ್ಟಿ ಅವರು ಮಾದರಿಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಡಾ.ಎಚ್.ಸಿ.ನಾಗರಾಜ್, ಡಾ.ವಿ.ಶ್ರೀಧರ್, ಡಾ.ಎನ್.ಎಚ್.ಪ್ರಸಾದ್ ಇದ್ದಾರೆ.   

ಬೆಂಗಳೂರು: ‘ರೈತನಿಗೆ ಸಹಾಯ ಮಾಡಲು ಹಾಗೂ ಆತ ಬೆಳೆದ ಬೆಳೆಗಳನ್ನು ರಕ್ಷಿಸಲುರೋಬೋಟಿಕ್, ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳನ್ನು ಕೃಷಿ ಕ್ಷೇತ್ರಕ್ಕೆ ಪರಿಣಾಮಕಾರಿಯಾಗಿ ಅಳವಡಿಸಬೇಕು’ ಎಂದುಕೇಂದ್ರೀಯ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೊ.ಎನ್‌.ಆರ್.ಶೆಟ್ಟಿ ತಿಳಿಸಿದರು.

ಯಲಹಂಕದ ನಿಟ್ಟೆ ಮೀನಾಕ್ಷಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಎಂಐಟಿ) ನಗರದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ತಂತ್ರಜ್ಞಾನ ಒಗ್ಗೂಡಿಸುವ (ಐಒಟಿ) ಮಾದರಿಗಳ ಪ್ರದರ್ಶನ ‘ಯುಕ್ತಾ -2019’ಕ್ಕೆ ಚಾಲನೆ ನೀಡಿ, ಮಾತನಾಡಿದರು.

‘ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಆವಿಷ್ಕಾರಗಳು ನಡೆಯುತ್ತಿದೆ. ಭಾರತ ದಂತಹ ಕೃಷಿ ಪ್ರಧಾನ ದೇಶದಲ್ಲಿ ತಂತ್ರಜ್ಞಾನಗಳ ಮೂಲಕ ರೈತರ ಜೀವನಮಟ್ಟ ಸುಧಾರಣೆಗೆ ಮುಂದಾಗಬೇಕು. ಆಗ ದೇಶ ಇನ್ನಷ್ಟು ಅಭಿವೃದ್ಧಿಯಾಗುವ ಜತೆಗೆ ಕೃಷಿಕರ ಬವಣೆ ಕೂಡ
ನೀಗಲಿದೆ’ ಎಂದು ತಿಳಿಸಿದರು.

ADVERTISEMENT

‘ಅಂಗವಿಕಲರಿಗೆ ಸಹಕಾರಿಯಾದ ರಸ್ತೆ ಸಾರಿಗೆ ಮುನ್ಸೂಚನೆ ವ್ಯವಸ್ಥೆ’ ಮಾದರಿಯು ಪ್ರದರ್ಶನದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತ್ತು. ಈ ಮಾದರಿಯನ್ನು ಕೆ.ಸಿ.ಅಗಣ್ಯ, ಕೆ.ಸಿ.ಭಾರ್ಗವ್, ಕೆ.ಸಿಂಧೂ ಹಾಗೂ ವಿ.ವಿಘ್ನೇಶ್ವರನ್ ಅಭಿವೃದ್ಧಿಪಡಿಸಿದ್ದಾರೆ. ‘ಇತರರ ಸಹಾಯವಿಲ್ಲದೆ ಅಂಧರು ಸಹ ರಸ್ತೆಗಳನ್ನು ದಾಟಲು ಈ ಮಾದರಿ ಸಹಾಯ ಮಾಡಲಿದೆ. ಸಾಧನದಿಂದ ಚಲಿಸುವ ವಾಹನಗಳಿಗೆ ಸಂಕೇತಗಳನ್ನು ಕಳುಹಿಸುವ ಕೆಲಸ ಆಗಲಿದೆ. ಇದ ರಿಂದಾಗಿ ವಾಹನಗಳ ವೇಗವನ್ನು ನಿಧಾನಗೊಳಿಸಲು ಮತ್ತು ಪಾದಚಾರಿ ದಾಟಲು ಅನುಕೂಲವಾಗುತ್ತದೆ' ಎಂದು ಕೆ.ಭಾರ್ಗವ್ ವಿವರಿಸಿದರು.

ಪಿ.ಅಮೂಲ್ಯಾ, ಎ.ಎಸ್.ಪೂಜಾ, ಬಿ.ಆರ್.ರೋಹಿಣಿ ಮತ್ತು ಮುಕ್ತಾ ಪ್ರಜ್ಞಾಶ್ರೀ ಅಭಿವೃದ್ಧಿಪಡಿಸಿದ ‘ಸ್ಮಾರ್ಟ್ ಫಾರ್ಮ್’ ಎಂಬ ಯೋಜನೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ‘ಸ್ಮಾರ್ಟ್ ಫೋನ್ ಮೂಲಕವೇ ಸಸ್ಯಗಳಿಗೆ ನೀರುಣಿಸುವ ಬಗ್ಗೆ ಮಾಹಿತಿ ಹಾಗೂ ನಿಗಾ ಇಡಬಹುದಾಗಿದೆ. ಸೌರಶಕ್ತಿಯ ಸಹಾಯದಿಂದಲೇ ನೀರಿನ ಯಂತ್ರದ ಗುಂಡಿಯನ್ನು ಆನ್ ಮತ್ತು ಆಫ್ ಮಾಡ ಬಹುದು’ ಎಂದು ಪಿ.ಅಮೂಲ್ಯಾ ತಿಳಿಸಿದರು.

150 ಕ್ಕೂ ಹೆಚ್ಚು ಮಾದರಿಗಳು ಪ್ರದರ್ಶನದಲ್ಲಿದ್ದವು.ಎನ್‌.ಎಂ.ಐ.ಟಿಯ ಪ್ರಾಂಶುಪಾಲ ಡಾ.ಎಚ್.ಸಿ.ನಾಗರಾಜ್, ಡೀನ್ ಡಾ.ವಿ.ಶ್ರೀಧರ್ ಹಾಗೂ ಪ್ರಾಧ್ಯಾಪಕ ಎನ್.ಎಚ್. ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.