ಬೆಂಗಳೂರು: ಸಾಧನೆಗೆ ದೈಹಿಕ ದೌರ್ಬಲ್ಯ ಅಡ್ಡಿಯಾಗುವುದಿಲ್ಲ ಎಂದು ಅಂತರರಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಪಟು ಪದ್ಮಶ್ರೀ ಮಾಲತಿ ಕೆ.ಹೊಳ್ಳ ಅಭಿಪ್ರಾಯಪಟ್ಟರು.
ಬೆಂಗಳೂರು ವಿಶ್ವವಿದ್ಯಾಲಯ ವಿಶೇಷ ಚೇತನರ ಅಭಿವೃದ್ಧಿ ವಿಭಾಗದಿಂದ ಹಮ್ಮಿಕೊಂಡಿದ್ದ ‘ಕಲಾ ಚೈತನ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೈಹಿಕವಾಗಿ ಕೊರತೆ ಅನುಭವಿಸಿದರೂ ಮಾನಸಿಕವಾಗಿ ಕುಗ್ಗಬಾರದು. ನಿರ್ದಿಷ್ಟ ಗುರಿಯತ್ತ ಕೇಂದ್ರೀಕರಿಸಿ ಸಬಲರಂತೆ ಕ್ರಿಯಾಶೀಲರಾಗಬೇಕು. ಆತ್ಮಸ್ಥೈರ್ಯದ ಕೊರತೆ ಮನುಜನ್ನು ಅಧೀರಗೊಳಿಸುತ್ತದೆ. ಸೋಲಿನತ್ತ ಕೊಂಡೊಯ್ಯುತ್ತದೆ. ಅಂತಹ ಮನಃಸ್ಥಿತಿಯನ್ನು ವಿಶೇಷ ಚೇತನರು ಮೊದಲು ಕಿತ್ತೊಗೊಯಬೇಕು’ ಎಂದರು.
ವಿಶೇಷ ಚೇತನ ಮಕ್ಕಳಿಗೆ ತ್ರಿಚಕ್ರ ವಾಹನವನ್ನು ನೀಡುವ ಯೋಜನೆಯನ್ನು ಹಲವಾರು ವರ್ಷಗಳ ಹಿಂದೆಯೇ ರೂಪಿಸಲಾಗಿತ್ತು. ಇದೀಗ ಯೋಜನೆಯು ಕಾರ್ಯ ರೂಪಕ್ಕೆ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು ವಿದ್ಯಾಭ್ಯಾಸಕ್ಕೆ ಮತ್ತಷ್ಟು ಕಾಲವಕಾಶ ದೊರೆಯಲಿದೆ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಹೇಳಿದರು.
ಅಮೇರಿಕವನ್ನು ಆಳಿದ ರಾಷ್ಟ್ರಾಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಮತ್ತು ವಿಶ್ವ ಕಂಡ ಅತ್ಯಂತ ಶ್ರೇಷ್ಠ ಪ್ರಾಧ್ಯಾಪಕಿ ಹೆಲನ್ ಕೆಲ್ಲರ್ ಕೂಡಾ ವಿಶೇಷ ಚೇತನರಾಗಿದ್ದರು. ಇತರರಿಗೆ ಹೋಲಿಸಿದರೆ ವಿಶೇಷ ಚೇತನರು ಅತ್ಯಂತ ಸೂಕ್ಷ್ಮ ಮತಿಗಳಾಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಾಯನ ವಿಭಾಗದಲ್ಲಿ ಹಲವಾರು ವಿಶೇಷ ಚೇತನರು ಅಪ್ರತಿಮ ಸಾಧನೆ ಮೆರೆದಿದ್ದಾರೆ. ಅವಕಾಶಗಳು ದೊರೆತರೆ ಇನ್ನಷ್ಟು ಸಾಧನೆ ಮಾಡಬಲ್ಲರು ಎಂದು ಕುಲ ಸಚಿವ ಬಿ.ಕೆ.ರವಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.