
ಬೆಂಗಳೂರು: ನಕ್ಷೆ ಮಂಜೂರಾತಿ ಇಲ್ಲದಿದ್ದರೆ ಯಾವುದೇ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಿದ್ಯುತ್ ಸಂಪರ್ಕ ನೀಡುವ ಮೊದಲು, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅದಿಲ್ಲದಿದ್ದರೆ ವಿದ್ಯುತ್ ಸಂಪರ್ಕ ನೀಡಬಾರದು’ ಎಂದು ಬೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಳಗೆರೆ ರಸ್ತೆಯಲ್ಲಿ ಬೆಸ್ಕಾಂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸವನ್ನು ವೇಗಗೊಳಿಸಲು ನಿರ್ದೇಶನ ನೀಡಿದರು.
ಇಬ್ಲೂರು ಜಂಕ್ಷನ್ ಬಳಿ ಮೇಲ್ಸೇತುವೆ ಕೆಳಭಾಗದಲ್ಲಿ ಈಗಾಗಲೇ ಸುಂದರೀಕರಣ ಮಾಡಲಾಗಿದೆ. ಇದೇ ಮಾದರಿಯಲ್ಲಿ ಇತರೆ ಮೇಲ್ಸೇತುವೆಗಳ ಕೆಳಭಾಗದಲ್ಲಿ ಸಿ.ಎಸ್.ಆರ್ ನಿಧಿಯಲ್ಲಿ ಅಭಿವೃದ್ಧಿಪಡಿಸಲು ಸೂಚನೆ ನೀಡಿದರು.
ಮಹದೇವಪುರ ವ್ಯಾಪ್ತಿಯ ರಾಜಕಾಲುವೆ ಒತ್ತುವರಿ ಪ್ರಕರಣಗಳನ್ನು ಪರಿಶೀಲಿಸಿ ತಕ್ಷಣವೇ ತೆರವುಗೊಳಿಸಬೇಕು. ಗುಂಜೂರು ಪ್ರದೇಶದಲ್ಲಿ ರಾಜಕಾಲುವೆ ಮೇಲಿನ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಎಂದು ಹೇಳಿದರು.
ನ್ಯೂ ಹಾರಿಜನ್ ಕಾಲೇಜು ಬಳಿಯ ಎಸ್.ಎಚ್ 45 ವರ್ತೂರು-ಗುಂಜೂರು ಮುಖ್ಯ ರಸ್ತೆಯ ಬಳಿ, ಹೊಸದಾಗಿ ರಸ್ತೆ ನಿರ್ಮಾಣ ಮಾಡಲು 6 ಎಕರೆ ಅರಣ್ಯ ಜಾಗ ನೀಡಿದರೆ, ಈ ಭಾಗದಲ್ಲಿ ಬಹುತೇಕ ಸಂಚಾರ ದಟ್ಟಣೆ ನಿವಾರಣೆಯಾಲಿದೆ. ಈ ಸಂಬಂಧ ಅರಣ್ಯ ಜಾಗ ವಶಪಡಿಸಿಕೊಂಡು, ರಸ್ತೆ ನಿರ್ಮಾಣಕ್ಕೆ ಕ್ರಮವಹಿಸುವಂತೆ ಸೂಚನೆ ನೀಡಿದರು.
ಪೂರ್ವ ನಗರ ಪಾಲಿಕೆ ಆಯುಕ್ತ ರಮೇಶ್ ಡಿ.ಎಸ್, ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್, ಜಂಟಿ ಆಯುಕ್ತರಾದ ದಾಕ್ಷಾಯಿಣಿ ಕೆ, ಸುಧಾ, ಮುಖ್ಯ ಎಂಜಿನಿಯರ್‌ಗಳಾದ ಲೋಕೇಶ್ ಹಾಗೂ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಮಹೇಶ್ವರ್ ಅವರ ಸೂಚನೆಗಳು
* ಹೊರ ವರ್ತುಲ ರಸ್ತೆಯ ಬಸ್ ನಿಲ್ದಾಣಗಳಲ್ಲಿ ಅಗತ್ಯ ಸುಧಾರಣೆ ಮಾಡಿ * ಸರ್ಜಾಪುರ–ಇಬ್ಲೂರು ಮಾರ್ಗದಲ್ಲಿ ಪಾದಚಾರಿ ಸೇತುವೆ ನಿರ್ಮಿಸಿ • ಇಬ್ಲೂರು–ಕಾರ್ಮೆಲ್ರಾಂ–ಸರ್ಜಾಪುರ ಮಾರ್ಗದಲ್ಲಿ ಪಾದಚಾರಿ ಮಾರ್ಗ ಮತ್ತು ಸೈಕ್ಲಿಂಗ್ ಟ್ರ್ಯಾಕ್ ನಿರ್ಮಿಸಿ * 60 ಕಿಮೀ ವ್ಯಾಪ್ತಿಯ ಸಿಡಿಪಿ ಹಾಗೂ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಟಾಸ್ಕ್ ಫೋರ್ಸ್ ರಚಿಸಿ * ಇಬ್ಲೂರು ಜಂಕ್ಷನ್‌ನಲ್ಲಿ ವೈಜ್ಞಾನಿಕ ಟ್ರಾಫಿಕ್ ವಿನ್ಯಾಸಗೊಳಿಸಿ * ಟ್ರಿಪಲ್-ಡೆಕ್ಕರ್ ಮೂಲಕ ಮೂಲಸೌಕರ್ಯ ವಿಸ್ತರಣೆ ಮಾಡಿ * ಒಆರ್‌ಆರ್ ಸುತ್ತಮುತ್ತಲಿನ ಸಮಸ್ಯೆಗಳ ಸಾಮೂಹಿಕ ಪರಿಹಾರಕ್ಕಾಗಿ ಪೂರ್ವ ಮತ್ತು ದಕ್ಷಿಣ ನಗರ ಪಾಲಿಕೆಗಳ ಸಂಯುಕ್ತ ಸಮಿತಿ ರಚಿಸಿ * 23 ಒಣ ಕಸ ಸಂಗ್ರಹ ಕೇಂದ್ರ ಆರು ತಿಂಗಳಲ್ಲಿ ಸ್ಥಾಪಸಿ * ವರ್ತೂರಿನಲ್ಲಿ ಒಣಕಸ ಘಟಕ ಶೀಘ್ರ ಆರಂಭಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.