ADVERTISEMENT

ತುಷ್ಟೀಕರಣದ ಅಗತ್ಯ ಇಲ್ಲ; ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 0:10 IST
Last Updated 11 ಜನವರಿ 2026, 0:10 IST
ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್. ಗುರುಮೂರ್ತಿ, ಎಂ. ಅಬ್ದುಲ್ ರೆಹಮಾನ್ ಪಾಷ, ಮೊಹಮದ್ ಫಾರೂಕ್ ಪಾಷ, ರಿಜ್ವಾನ್ ಅರ್ಷದ್, ಹಂಪ ನಾಗರಾಜಯ್ಯ ಮತ್ತು ಎಂ. ವೀರಪ್ಪ ಮೊಯಿಲಿ ಭಾಗವಹಿಸಿದ್ದರು -ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್. ಗುರುಮೂರ್ತಿ, ಎಂ. ಅಬ್ದುಲ್ ರೆಹಮಾನ್ ಪಾಷ, ಮೊಹಮದ್ ಫಾರೂಕ್ ಪಾಷ, ರಿಜ್ವಾನ್ ಅರ್ಷದ್, ಹಂಪ ನಾಗರಾಜಯ್ಯ ಮತ್ತು ಎಂ. ವೀರಪ್ಪ ಮೊಯಿಲಿ ಭಾಗವಹಿಸಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಿಂದೂ, ಮುಸ್ಲಿಂ, ಪಾರ್ಸಿ, ಸಿಖ್ಖರು ಈ ದೇಶದ ನಾಗರಿಕರು. ಹೀಗಿರುವಾಗ ಯಾವ ಸಮುದಾಯವನ್ನು ತುಷ್ಟೀಕರಣ ಮಾಡುವ ಅಗತ್ಯ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದರು.

ನಗರದ ಭವತಾರಿಣಿ ಪ್ರಕಾಶನ ಮತ್ತು ಚಾರಿಟಬೆಲ್ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಎಸ್.ಗುರುಮೂರ್ತಿ ಅವರ 'ಭಾರತೀಯ ಮುಸ್ಲಿಂ ವೀರಯೋಧರ ವೀರಗಾಥೆಗಳು’ ಪುಸ್ತಕವನ್ನು ಜನಾರ್ಪಣೆಗೊಳಿಸಿ ಮಾತನಾಡಿದರು.

‘ದೇಶದ ಜನರು ನಮ್ಮವರು ಅಂದುಕೊಂಡರೆ ಯಾವ ಸಮಸ್ಯೆ ಬರುವುದಿಲ್ಲ. ಇಲ್ಲಿರುವ ಮುಸ್ಲಿಮರು ನಮ್ಮ ದೇಶದಲ್ಲಿಯೇ ಹುಟ್ಟಿರುವುದು. ಕೆಲವರು ತುಷ್ಟೀಕರಣದ ಕುರಿತು ಮಾತನಾಡುತ್ತಿದ್ದಾರೆ. ಜ್ಞಾನ ಇಲ್ಲದ ಜನರು ದೇಶ ಆಳುತ್ತಿದ್ದಾರೆ ಮತ್ತು ಈ ರೀತಿಯ ವ್ಯಾಖ್ಯಾನ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ನಾನು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಆಚರಣೆ ಮಾಡಿದ್ದೆವು. ಆಗ ಯಾವುದೇ ಪ್ರತಿಭಟನೆ ಮಾಡಿರಲಿಲ್ಲ. ನಂತರ ವಿವಾದ ಶುರು ಮಾಡಿದ್ದಾರೆ. ಟಿಪ್ಪು ದೇಶಕ್ಕಾಗಿ ತನ್ನ ಮಕ್ಕಳನ್ನು ಬ್ರಿಟಿಷರಿಗೆ ಅಡವಿಟ್ಟ. ದೇಶದ ಇತಿಹಾಸ ತಿಳಿದುಕೊಳ್ಳಬೇಕು. ದೇಶದ ಸಂಸ್ಕೃತಿ, ಪ್ರಜಾಪ್ರಭುತ್ವ ಮೌಲ್ಯ ತಿಳಿದುಕೊಳ್ಳದ ಹೊರತು ಗಲಭೆಗಳು ನಿಲ್ಲುವುದಿಲ್ಲ’ ಎಂದು ಹೇಳಿದರು.

ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಮಾತನಾಡಿ, ‘ಭಾಷೆಗೂ ಜಾತಿ ಕಟ್ಟುತ್ತಿದ್ದಾರೆ. ಉರ್ದು ಮಾತನಾಡಿದರೆ ಮುಸ್ಲಿಂ, ಪ್ರಾಕೃತ ಮಾತನಾಡಿದರೆ ಜೈನರು ಎನ್ನುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಮನಸ್ಸು ಪರಿವರ್ತನೆ ಆಗುವಂತಹ ಪುಸ್ತಕವನ್ನು ಗುರುಮೂರ್ತಿ ಅವರು ಬರೆದಿದ್ದಾರೆ’ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಸಾಹಿತಿ ಪ್ರೊ.ಜಿ.ಅಶ್ವತ್ಥ ನಾರಾಯಣ, ಲೇಖಕರಾದ ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ, ಷಾಕಿರಾ ಖಾನಂ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಮೊಹಮ್ಮದ್ ರಫಿ ಪಾಷ, ಪ್ರಾಧ್ಯಾಪಕ ಡಾ.ಮೊಹಮ್ಮದ್ ಫಾರೂಕ್ ಪಾಷ ಉಪಸ್ಥಿತರಿದ್ದರು.

---

'ಭಾರತ ದೇಶಕ್ಕೆ ಸ್ವರೂಪ ಕೊಟ್ಟವರು ಗಾಂಧೀಜಿ. ಇದನ್ನು ಮರೆತರೆ ನಾವು ದೇಶ ದ್ರೋಹಿಗಳಾಗುತ್ತೇವೆ. ದೇಶಕ್ಕಾಗಿ ಹೋರಾಡಿದವರ ಮಾಹಿತಿಯನ್ನು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ಈ ಪುಸ್ತಕದ ಮೂಲಕ ಅಂತಹ ಕೆಲಸವಾಗಿದೆ'

-ಎಂ.ವೀರಪ್ಪ ಮೊಯಿಲಿ ಮಾಜಿ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.