ADVERTISEMENT

ಬೆಂಗಳೂರು: ದುಬಾರಿ ಕಾರಿಡಾರ್‌ ನಿರ್ಮಾಣ ಬೇಕೆ? ತಜ್ಞರು ಹೇಳುವುದೇನು...

ಅತಿ ದಟ್ಟಣೆಯ 12 ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ₹ 1,240.48 ಕೋಟಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 3:03 IST
Last Updated 8 ಡಿಸೆಂಬರ್ 2021, 3:03 IST
ವಿ.ರವಿಚಂದರ್‌
ವಿ.ರವಿಚಂದರ್‌   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ. ರಸ್ತೆ ಗುಂಡಿ ಮುಚ್ಚುವುದಕ್ಕೆ ಅನುದಾನ ಬಿಡುಗಡೆಗೂ ಯೋಚಿಸುವಂತಹ ಸ್ಥಿತಿಯಲ್ಲಿ ಸರ್ಕಾರ ಇದೆ. ಇಷ್ಟೊಂದು ಆರ್ಥಿಕ ಸಂಕಷ್ಟದ ಸಂದರ್ಭದಲ್ಲೇ ಅತಿ ದಟ್ಟಣೆಯ 12 ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ₹ 1,240.48 ಕೋಟಿ ವೆಚ್ಚದ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಅನುಮೋದನೆ ನೀಡಲು ಸಿದ್ಧತೆ ನಡೆದಿದೆ.

ಈಗಾಗಲೇ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ರಸ್ತೆಗಳನ್ನು ಮತ್ತೆ ಕಾರಿಡಾರ್‌ಗಳನ್ನಾಗಿ ಪರಿವರ್ತಿಸಲು ಭಾರಿ ಮೊತ್ತ ವ್ಯಯಿಸುವುದು ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಯೋಜನೆ ನಗರಕ್ಕೆ ಅನಿವಾರ್ಯವೇ? ಇಷ್ಟೊಂದು ದುಬಾರಿಯಾದ ಯೋಜನೆಗಳನ್ನು ಮುಂದುವರಿಸಬೇಕೇ? ಎಂಬುದರ ಕುರಿತು ಈ ವಾರದ ‘ರಾಜಧಾನಿಯ ಒಡಲ ದನಿ’ಯಲ್ಲಿ ತಜ್ಞರು, ನಗರವಾಸಿಗಳು ಹಂಚಿ ಕೊಂಡಿರುವ ಅಭಿಪ್ರಾಯ ಇಲ್ಲಿದೆ.

‘ಇಂತಹ ಕಾರಿಡಾರ್‌ ಅಗತ್ಯವೇ ಇಲ್ಲ’

ADVERTISEMENT

ಯಾವುದೇ ನಗರದ ಒಳಗೆ ತಡೆರಹಿತ ಕಾರಿಡಾರ್‌ಗಳನ್ನು ನಿರ್ಮಿಸುವುದು ಸೂಕ್ತವಲ್ಲ. ಇಂತಹ ಕಾರಿಡಾರ್‌ಗಳು ವೇಗದ ವಾಹನ ಸಂಚಾರವನ್ನು ಉತ್ತೇಜಿಸುತ್ತವೆ ಮತ್ತು ಪಾದಚಾರಿಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ. ಈ ಕಾರಿಡಾರ್‌ಗಳು ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಉತ್ತೇಜಿಸುವುದಿಲ್ಲ. ವಿಮಾನ ನಿಲ್ದಾಣ ಸಂಪರ್ಕದಂತಹ ಉದ್ದೇಶಗಳಿಗೆ ಮಾತ್ರ ಈ ರೀತಿಯ ಯೋಜನೆಗಳನ್ನು ರೂಪಿಸುವುದು ಸೂಕ್ತ.

ಬೆಂಗಳೂರಿನಲ್ಲಿ ಇಂತಹ ದೊಡ್ಡ ಯೋಜನೆಗಳಲ್ಲಿ ಕಾಲಮಿತಿಯಲ್ಲಿ ಪೂರ್ಣಗೊಳಿಸಿದ ಉದಾಹರಣೆಯೇ ಇಲ್ಲ. ಒಮ್ಮೆ ಯೋಜನೆ ಆರಂಭಿಸಿ ವರ್ಷಗಟ್ಟಲೆ ಪೂರ್ಣಗೊಳಿಸದೇ ಇದ್ದರೆ ಇನ್ನಷ್ಟು ದುಬಾರಿ ವೆಚ್ಚಕ್ಕೆ ಕಾರಣವಾಗುತ್ತದೆ. ಯಾವ ದೃಷ್ಟಿಕೋನದಿಂದಲೂ ಜನಸ್ನೇಹಿ ಅಲ್ಲದ ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು.

ಜನರಿಗೆ ಬೇಕಿರುವುದು ತಡೆರಹಿತ ಕಾರಿಡಾರ್‌ಗಳಲ್ಲ. ಐದು ಕಿ.ಮೀ. ವ್ಯಾಪ್ತಿಯಲ್ಲೇ ಎಲ್ಲ ಸೌಲಭ್ಯಗಳೂ ದೊರಕುವಂತಹ ವ್ಯವಸ್ಥೆ ಮಾಡಬೇಕು. ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸಬೇಕು.
ಇರುವ ರಸ್ತೆಗಳನ್ನು ಸಂಚಾರ ಯೋಗ್ಯವಾಗಿ ನಿರ್ವಹಿಸಬೇಕು.

ವಿ.ರವಿಚಂದರ್‌, ನಗರ ಯೋಜನಾ ತಜ್ಞ

‘ಹುಚ್ಚು ಯೋಜನೆಯನ್ನು ತಿರಸ್ಕರಿಸಬೇಕು’

‘ಒಂದು ಸರಪಳಿಯು ತನ್ನ ದುರ್ಬಲ ಕೊಂಡಿಯವರೆಗೂ ತುಂಬಾ ಗಟ್ಟಿಯಾಗಿಯೇ ಇರುತ್ತದೆ’ ಎನ್ನುವ ಮಾತಿದೆ. ಸಂಚಾರ ದಟ್ಟಣೆ ನಿರ್ವಹಣೆಗೂ ಇದು ಅನ್ವಯವಾಗುತ್ತದೆ. ಅತಿಯಾದ ವಾಹನ ದಟ್ಟಣೆ ಇರುವ ಮಾರ್ಗಗಳಲ್ಲಿ ಈ ರೀತಿ ತಡೆರಹಿತ ಕಾರಿಡಾರ್‌ ನಿರ್ಮಿಸುವುದರಿಂದ ಯಾವ ಅನುಕೂಲವೂ ಆಗುವುದಿಲ್ಲ. ದಟ್ಟಣೆಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಿಸುವುದಕ್ಕೆ ಮಾತ್ರ ಸೀಮಿತವಾಗಬಹುದು. ಈ ಮಾತನ್ನು ಜಗತ್ತಿನ ಸಾರಿಗೆ ತಜ್ಞರು ಹಲವು ಬಾರಿ ಹೇಳಿದ್ದಾರೆ.

ಬೆಂಗಳೂರಿಗೆ ಸದ್ಯ ಬೇಕಿರುವುದು ದುಬಾರಿ ವೆಚ್ಚದಲ್ಲಿ ನಿರ್ಮಿಸುವ ತಡೆರಹಿತ ರಸ್ತೆ ಮಾರ್ಗಗಳಲ್ಲ. ಸಮಗ್ರ ಸಾರಿಗೆ ನೀತಿಯ ಅನುಷ್ಠಾನ ಈ ಹೊತ್ತಿನ ತುರ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರ. ತಾಂತ್ರಿಕವಾಗಿ ಯಾವ ಅಭಿವೃದ್ಧಿ ಯೋಜನೆ ಸೂಕ್ತ ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಅವರಿಗೆ ಇದೆ ಎಂದು ನಂಬಿಯೂ ನಾವು ಈ ಯೋಜನೆಯನ್ನು ವಿರೋಧಿಸಬೇಕಾಗಿದೆ.

ಇಂತಹ ಭಾರಿ ವೆಚ್ಚದ ಯೋಜನೆಯ ಅನುಷ್ಠಾನಕ್ಕೆ ಯಾವುದೇ ಸರ್ಕಾರ ಉತ್ಸಾಹ ತೋರಿದರೂ ಅದರ ನಾಯಕತ್ವದ ಉದ್ಧೇಶದ ಬಗ್ಗೆ ಜನರಲ್ಲಿ ಅನುಮಾನ ಮೂಡುವುದು ಸಹಜ. ಪ್ರತಿಭಟನೆಗೆ ಅವಕಾಶ ಮಾಡಿಕೊಡದೆ ಈ ಹುಚ್ಚು ಯೋಜನೆಯನ್ನು ಈಗಲೇ ತಿರಸ್ಕರಿಸಿ ಎಂದು ಮುಖ್ಯಮಂತ್ರಿಯವರನ್ನು ಆಗ್ರಹಿಸುತ್ತೇನೆ.

- ಪ್ರಕಾಶ್‌ ಬೆಳವಾಡಿ,ರಂಗಕರ್ಮಿ, ಚಿತ್ರನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.