
ಬೆಂಗಳೂರು: ‘ಈಜಿಪುರ ಮೇಲ್ಸೇತುವೆ ಪೂರ್ಣಗೊಳಿಸುವ ಕಾಮಗಾರಿಯನ್ನು ಶೀಘ್ರ ಆರಂಭಿಸದಿದ್ದರೆ ನಗರದಲ್ಲಿ ಇನ್ನಾವುದೇ ಹೊಸ ಮೇಲ್ಸೇತುವೆ ಆರಂಭವಾಗಲು ಬಿಡುವುದಿಲ್ಲ. ಎಲ್ಲೆಡೆ ಪ್ರತಿಭಟನೆ, ಧರಣಿ ಆರಂಭಿಸಲಾಗುತ್ತದೆ’ ಎಂದು ಕೋರಮಂಗಲ ನಿವಾಸಿಗಳು ಎಚ್ಚರಿಸಿದ್ದಾರೆ.
ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ಬೇಡ ಎಂದು ಸ್ಥಳೀಯ ನಾಗರಿಕರು ಒತ್ತಾಯ, ಪ್ರತಿಭಟನೆ ಮಾಡುತ್ತಿದ್ದರೂ ಬಿಬಿಎಂಪಿ ಅದಕ್ಕೆ ಮಣಿಯದೆ ಕೆಲಸ ಮುಂದುವರಿಸಿದೆ. ಆದರೆ, ಸ್ಥಗಿತಗೊಂಡಿರುವ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಿದ್ದಾರೆ. ಅಲ್ಲದೆ, ಹೈಕೋರ್ಟ್ ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಬೇಕೆಂದು ಆದೇಶ ನೀಡಿದ್ದರೂ ಬಿಬಿಎಂಪಿ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.
‘ಬಿಬಿಎಂಪಿ ಆಡಳಿತಾಧಿಕಾರಿಯು ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದು, ಕೂಡಲೇ ಈಜಿಪುರ ಮೇಲ್ಸೇತುವೆಯನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದ್ದೇವೆ. ಆದರೆ ಈವರೆಗೆ ಅವರು ನಿಧಾನಗತಿಯನ್ನೇ ಅನುಸರಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ. ಅವರೂ ಕ್ರಮ ಕೈಗೊಳ್ಳದಿದ್ದರೆ ನಗರದಾದ್ಯಂತ ನಾವು ಪ್ರತಿಭಟನೆ ಆರಂಭಿಸುತ್ತೇವೆ’ ಎಂದು ಕೋರಮಂಗಲ ಎಸ್‌ಟಿ ಬೆಡ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಂದ್ರ ಬಾಬು ಹೇಳಿದರು.
‘ಶೇ 42ರಷ್ಟು ಕಾಮಗಾರಿ ಮುಗಿದು ಸ್ಥಗಿತಗೊಂಡಿರುವ ಈಜಿಪುರ ಮೇಲ್ಸೇತುವೆ ಪೂರ್ಣಗೊಳಿಸಲು ಹೈಕೋರ್ಟ್ ಆದೇಶದ ನಂತರ ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. ಜ.25ರಂದು ಟೆಂಡರ್ ತೆರೆಯಬೇಕಾಗಿತ್ತು. ತಾಂತ್ರಿಕ ಬಿಡ್ ಮುಗಿದು, ಹಣಕಾಸು ಬಿಡ್ ಹಂತದಲ್ಲೇ ಬಿಬಿಎಂಪಿ ಕಾಲಕಳೆಯುತ್ತಿದೆ. ಸರ್ಕಾರದ ಅನುಮೋದನೆಗೆ ಕಳುಹಿಸದೆ ವಿಳಂಬ ಮಾಡುತ್ತಿರುವುದರಿಂದ ಚುನಾವಣೆ ಘೋಷಣೆಯಾದರೆ ಎಲ್ಲವೂ ಸ್ಥಗಿತಗೊಳ್ಳುತ್ತದೆ. ಮತ್ತೆ ಸಾಕಷ್ಟು ವಿಳಂಬ ಹಾಗೂ ಇನ್ನಷ್ಟು ಅಧಿಕ ವೆಚ್ಚವಾಗುವ ಸಂಭವವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಬಾಕಿ ಉಳಿದ ಕಾಮಗಾರಿಗೆ ಬಹುತೇಕ ಸಮಯಗಳಲ್ಲಿ ಹೆಚ್ಚಿನ ಹಣವನ್ನೇ ನೀಡಿ ಪೂರೈಸಬೇಕಾಗುತ್ತದೆ. ಒಬ್ಬರು ಪೂರ್ಣಗೊಳಿಸದ ಕಾಮಗಾರಿ ಪೂರೈಸಲು ಇನ್ನೊಬ್ಬರು ಬರುವುದು ಕಷ್ಟ. ಅಲ್ಲದೆ, ಕೆಲಸ ಬಿಟ್ಟು ಹೋಗಿರುವ ಗುತ್ತಿಗೆದಾರರಿಂದಲೇ ಮುಂದಿನ ಗುತ್ತಿಗೆದಾರರು ಕೇಳುವ ಹೆಚ್ಚಿನ ಹಣವನ್ನು ಕೊಡಿಸಬಹುದು ಎಂಬ ನಿಯಮವಿದೆ. ಅದನ್ನು ಬಿಬಿಎಂಪಿ ಈ ಪ್ರಕರಣದಲ್ಲಿ ಅಳವಡಿಸಿಕೊಳ್ಳಬಹುದು’ ಎಂದು ಬಿಬಿಎಂಪಿಯ ತಾಂತ್ರಿಕ ಎಂಜಿನಿಯರ್‌ಗಳೇ ಹೇಳಿದರು.
‘ಮೂರನೇ ಟೆಂಡರ್‌ನಲ್ಲಿ ಹೆಚ್ಚಿಗೆ ಬಿಡ್ ಮಾಡಿದ್ದಾರೆ. ಆ ಮೊತ್ತವನ್ನು ಕಡಿಮೆ ಮಾಡುವಂತೆ ಅವರೊಂದಿಗೆ ಚರ್ಚೆ ನಡೆದಿದೆ. ಅದು ಅಂತಿಮವಾದ ಮೇಲೆ, ಮುಖ್ಯ ಆಯುಕ್ತರ ಸೂಚನೆಯಂತೆ ಮುಂದಿನ ಪ್ರಕ್ರಿಯೆ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್ ವಿನಾಯಕ ಸೂಗೂರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.